14 ನೇ ಮೇ , 2018-ಪ್ರಚಲಿತ ಘಟನೆಗಳು
(ಪುಟದ ಕೊನೆಯಲ್ಲಿ PDF ನ್ನು ಡೌನ್ ಲೋಡ್ ಮಾಡಿಕೊಳ್ಳಿ)
ರಾಷ್ಟ್ರೀಯ
1. ಕರಾವಳಿಗೆ ‘ವಿಕ್ರಮ್ ’ಗಸ್ತು ನೌಕೆ ಸೇರ್ಪಡೆ:
ಭಾರತೀಯ ತಟರಕ್ಷಣಾ ಪಡೆ (ಇಂಡಿಯನ್ ಕೋಸ್ಟ್ ಗಾರ್ಡ್)ಯ ಕರ್ನಾಟಕ ಕರಾವಳಿಗೆ ಅತ್ಯಾಧುನಿಕ ಗಸ್ತು ನೌಕೆ ಐಸಿಜಿಎಸ್ ವಿಕ್ರಮ್ ಸೇರ್ಪಡೆಗೊಂಡಿದೆ.
ಚೆನ್ನೈಯಲ್ಲಿ ಮೆಸರ್ಸ್ ಲಾರ್ಸನ್ ಆ್ಯಂಡ್ ಟರ್ಬೊ ಲಿ. ನಿರ್ಮಿಸಿದ ಈ ಗಸ್ತು ನೌಕೆ ನವ ಮಂಗಳೂರು ಬಂದರಿಗೆ ಆಗಮಿಸಿತು. ಇದು ಕರ್ನಾಟಕದ ಕರಾವಳಿಯಲ್ಲೇ ಇದ್ದು ಕಾರ್ಯ ನಿರ್ವಹಿಸಲಿದೆ. ಐಸಿಜಿಎಸ್ ಅತ್ಯಾಧುನಿಕ ಸೆನ್ಸರ್, ಯಂತ್ರೋಪಕರಣಗಳು, ತಂತ್ರಜ್ಞಾನ, ದಿಕ್ಸೂಚಿ ಮತ್ತು ಸಂವಹನ ಸಾಧನಗಳನ್ನು ಒಳಗೊಂಡ ನೌಕೆಯಾಗಿದೆ.
300 ಎಂಎಂ ಗನ್, ಅಗ್ನಿ ನಿಯಂತ್ರಣ ವ್ಯವಸ್ಥೆ ಸಹಿತ 12.7 ಎಂಎಂ ಗನ್ ಅಳವಡಿಸಲಾಗಿದೆ. ಸಮಗ್ರ ಬ್ರಿಡ್ಜ್ ವ್ಯವಸ್ಥೆ, ಸ್ವಯಂಚಾಲಿತ ವಿದ್ಯುಚ್ಛಕ್ತಿ ನಿರ್ವಹಣೆ ವ್ಯವಸ್ಥೆ, ಹೈ ಪವರ್ ಬಾಹ್ಯ ಅಗ್ನಿಶಾಮಕ ವ್ಯವಸ್ಥೆಗಳಿವೆ. ನೌಕೆಯಲ್ಲಿ ಟ್ವಿನ್ ಎಂಜಿನ್ ಹೆಲಿಕಾಪ್ಟರ್ ಹೊತ್ತೊಯ್ಯುವ ಮತ್ತು ಹಾರಾಟಕ್ಕೆ ವ್ಯವಸ್ಥೆ, ನಾಲ್ಕು ಹೈಸ್ಪೀಡ್ ಬೋಟ್ಗಳು, ತುರ್ತು ಕಾರ್ಯಾಚರಣೆಯ ಎರಡು ಪುಟ್ಟ ಬೋಟ್ಗಳು, ಹುಡುಕಾಟ ಮತ್ತು ರಕ್ಷಣಾ ಕಾರ್ಯದ ಸಲಕರಣೆಗಳು, ಗಸ್ತು ಸೌಲಭ್ಯಗಳು, ಸಮುದ್ರ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳಿವೆ. ಭೂಮಿಯ ಯಾವುದೇ ಅವಲಂಬನೆ ಇಲ್ಲದೆ 20 ದಿನಗಳ ಕಾಲ ಸಮುದ್ರದಲ್ಲಿ ಇರುವಷ್ಟು ಶಕ್ತವಾಗಿರುವ ವಿಕ್ರಮ್, 2100 ಟನ್ ಭಾರವಾಗಿದ್ದು, 9100 ಕಿವ್ಯಾಟ್ ನ ಎರಡು ಎಂಜಿನ್ಗಳಿವೆ. ನೌಕೆಯು ಎನ್ ಎಂಪಿಟಿಯಿಂದ ಕಾರ್ಯಾಚರಣೆ ನಡೆಸಲಿದ್ದು 14 ಅಧಿಕಾರಿಗಳು ಮತ್ತು 88 ಸಿಬ್ಬಂದಿ ಹೊಂದಿದೆ.
2. 68 ರೈಲು ನಿಲ್ದಾಣಗಳ ಆಧುನೀಕರಣ
ಅತ್ಯಾಧುನಿಕ ವಿಮಾನ ನಿಲ್ದಾಣಗಳ ಗುಣಮಟ್ಟಕ್ಕೆ ಹೋಲಿಕೆಯಾಗುವಂತೆ ದೇಶದ 68 ರೈಲು ನಿಲ್ದಾಣಗಳನ್ನು ಆಧುನೀಕರಿಸಲು ಭಾರತೀಯ ರೈಲ್ವೆ ಮುಂದಾಗಿದೆ.
5,000 ಕೋಟಿ ರೂ.ಗಳ ಈ ಯೋಜನೆಯಲ್ಲಿ ಬೆಂಗಳೂರು ರೈಲು ನಿಲ್ದಾಣವೂ ಸೇರಿದೆ. ಪುಣೆ, ಹೊಸದಿಲ್ಲಿ, ಶಿಮ್ಲಾ ,ಮಥುರಾ, ಅಂಬಾಲಾ, ವಾರಾಣಸಿ, ಡೆಹ್ರಾ ಡ್ಯೂನ್ ಸೇರಿದಂತೆ 68 ನಿಲ್ದಾಣಗಳು ಮೇಲ್ದರ್ಜೆ ಗೇರಲಿವೆ. ಕೆಲವು ನಿಲ್ದಾಣಗಳಲ್ಲಿ ಈಗಾಗಲೇ ಕಾಮಗಾರಿ ಆರಂಭಗೊಂಡಿದೆ.
ಭಾರತೀಯ ರೈಲ್ವೆಯನ್ನು ಪ್ರತಿದಿನ ಹೆಚ್ಚಿನ ಪ್ರಯಾಣಿಕರು ಬಳಸುತ್ತಿದ್ದು, ಆಧುನೀಕರಣ ದಿಂದ ಅನುಕೂಲವಾಗಲಿದೆ.
ಏನೇನು ಇರಲಿದೆ?
* ವಿಮಾನ ನಿಲ್ದಾಣಗಳಲ್ಲಿ ಲಭ್ಯವಿರುವ ಪ್ರಯಾಣಿಕ ಸ್ನೇಹಿ
ವ್ಯವಸ್ಥೆ ಅಥವಾ ಸೇವೆಗಳು ಹೊಸ ರೈಲು ನಿಲ್ದಾಣಗಳಲ್ಲಿ ಲಭ್ಯ.
* ರೈಲಿಗೆ ಕಾಯುತ್ತಾ ಕೂರಲು ಹವಾನಿಯಂತ್ರಿತ ನಿರೀಕ್ಷಣಾ ಕೊಠಡಿಗಳ ನಿರ್ಮಾಣ.
* ಫುಟ್ ಕೋರ್ಟ್ಗಳು, ಹೊಸ ಸೇತುವೆಗಳ ನಿರ್ಮಾಣ. ಎಲಿವೇಟರ್ಗಳ ಅಳವಡಿಕೆ.
3. ಗ್ರಾಹಕ ಹಕ್ಕುಗಳ ಬಗ್ಗೆ ನಿಮಗೆಷ್ಟು ಗೊತ್ತು ?
ಸುರಕ್ಷತೆಯ ಹಕ್ಕು:
ಗ್ರಾಹಕ ತಾನು ಖರೀದಿಸುವ ವಸ್ತು ಅಥವಾ ಸೇವೆಯಿಂದ ಹಾನಿಯಾಗದಂತೆ ರಕ್ಷಿಸಿಕೊಳ್ಳುವಅಂದರೆ, ಖರೀದಿಯಾದ ವಸ್ತುಗಳಿಂದ ಗ್ರಾಹಕನಿಗೆ ಯಾವುದೇ ರೀತಿಯ ನಷ್ಟವನ್ನುಂಟು ಮಾಡಬಾರದು. ಹಾಗೆಯೇ, ಸೇವೆ ಒದಗಿಸುವುದಾತನಿಂದಲೂ ತೊಂದರೆಯಾಗಬಾರದು.
ಮಾಹಿತಿ ಹಕ್ಕು:
ವಸ್ತುಗಳು ಅಥವಾ ಸೇವಾ ಗುಣಮಟ್ಟ, ಪ್ರಮಾಣ, ಪರಿಶುದ್ಧತೆ ಮತ್ತು ಬೆಲೆಯ ಬಗ್ಗೆ ತಿಳಿದುಕೊಳ್ಳುವ ಹಕ್ಕು ಗ್ರಾಹಕನಿಗಿದೆ. ಯಾವುದೇ ರೀತಿಯ ಅಕ್ರಮ ಹಾಗೂ ಮೋಸವನ್ನು ತಡೆಯುವ ನಿಟ್ಟಿನಲ್ಲಿ ಗ್ರಾಹಕನಿಗೆ ಈ ಹಕ್ಕು ನೀಡಲಾಗಿದೆ. ಹಾಗಾಗಿ, ವಸ್ತುಗಳನ್ನು ಮಾರಾಟ ಮಾಡುವಾತ ಈ ಎಲ್ಲ ಮಾಹಿತಿಯನ್ನು ಗ್ರಾಹಕನಿಗೆ ನೀಡಲೇಬೇಕಾಗುತ್ತದೆ.
ಆಯ್ಕೆ ಹಕ್ಕು:
ಪ್ರತಿಯೊಬ್ಬಗ್ರಾಹಕನಿಗೂ ತನ್ನ ಇಚ್ಛೆಯಂತೆ ವಸ್ತುಗಳನ್ನು ಖರೀದಿಸುವ ಮತ್ತು ಸೇವೆಯನ್ನು ಪಡೆಯುವ ಹಕ್ಕು ಹೊಂದಿದ್ದಾನೆ. ಆಯ್ಕೆ ಹಕ್ಕು ಎಂದರೆ ಬೇರೇನೂ ಅಲ್ಲ, ನಾನಾ ನಮೂನೆಯ ವಸ್ತುಗಳು ಲಭ್ಯತೆ, ಸಾಮರ್ಥ್ಯ ಮತ್ತು ಅವುಗಳನ್ನು ಸ್ಪರ್ಧಾತ್ಮಕ ಬೆಲೆ ತೆತ್ತು ಖರೀದಿಸುವ ವಾತಾವರಣ ಸೃಷ್ಟಿಸಬೇಕಾಗುತ್ತದೆ. ಇಲ್ಲಿ ಸ್ಪರ್ಧಾತ್ಮಕ ಬೆಲೆ ಎಂದರೆ, ನ್ಯಾಯಬದ್ದವಾದ ಬೆಲೆಯಷ್ಟೆ. ಗ್ರಾಹಕ ತಾನು ಇಷ್ಟಪಟ್ಟ ಹಾಗೂ ತನಗೆ ಸೂಕ್ತವಾದ ಉತ್ಪನ್ನ ಪಡೆಯುವಲ್ಲಿ ಸಂಪೂರ್ಣವಾಗಿ ಸ್ವತಂತ್ರವಾಗಿರುತ್ತಾನೆ.
ಕೇಳುವ ಅಥವಾ ಪ್ರಾತಿನಿಧ್ಯದ ಹಕ್ಕು:
ಈ ಹಕ್ಕಿನ ಪ್ರಕಾರ, ಪ್ರತಿನಿಧಿಸುವ ಅಥವಾ ಆತನ ಹಿತಾಸಕ್ತಿಗಳನ್ನು ಪರಿಗಣಿಸುವ ಸ್ವಾತಂತ್ಯವನ್ನು ಹೊಂದಿದ್ದಾನೆ. ಒಂದು ವೇಳೆ ಗ್ರಾಹಕ ಶೋಷಣೆಗೊಳಗಾಗುತ್ತಿದ್ದರೆ ಅಥವಾ ಉತ್ಪನ್ನ ವಿರುದ್ದ ಯಾವುದೇ ದೂರುಗಳಿದ್ದರೆ ಅಥವಾ ಸೇವೆಯ ಬಗ್ಗೆ ಅತೃಪ್ತಿ ಇದ್ದರೆ ಅಂಥ ಸಂದರ್ಭದಲ್ಲಿ ಆತನ ವಾದವನ್ನು ಕೇಳಬೇಕಾಗುತ್ತದೆ. ಹಾಗೆಯೇ ಆತನ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಈ ಹಕ್ಕಿನಡಿ ಕಂಪನಿಗಳು ತಮ್ಮ ಸಂಸ್ಥೆಗಳಲ್ಲಿ ಗ್ರಾಹಕರು ದೂರುಗಳನ್ನು ಸ್ವೀಕರಿಸಲು ಕೇಂದ್ರಗಳನ್ನು ಆರಂಭಿಸಬೇಕಾಗುತ್ತದೆ.
ಪರಿಹಾರ ಕೇಳುವ ಹಕ್ಕು:
ಯಾವುದೇ ಶೋಷಣೆ ಹಾಗೂ ನ್ಯಾಯಬದ್ದವಲ್ಲದ ವ್ಯಾಪಾರದ ವಿರುದ್ದ ಗ್ರಾಹಕ ಪರಿಹಾರವನ್ನು ಪಡೆದುಕೊಳ್ಳುವ ಸ್ವಾತಂತ್ಯವನ್ನು ಈ ಹಕ್ಕು ನೀಡುತ್ತದೆ. ಈ ಹಕ್ಕು ಶೋಷಣೆಯ ವಿರುದ್ದ ಗ್ರಾಹಕನಿಗೆ ನ್ಯಾಯ ಕಲ್ಪಿಸುವ ಭರವಸೆಯನ್ನು ನೀಡುತ್ತದೆ. ಜತೆಗೆ ಅನ್ಯಾಯಕ್ಕೊಳಗಾದ ಗ್ರಾಹಕನಿಗೆ ಪರಿಹಾರ ಕೂಡ ನೀಡಬೇಕಾಗುತ್ತದೆ. ಅದು ನಗದು ರೂಪದಲ್ಲಿ ಇರಬಹುದು ಅಥವಾ ಬದಲಿ ವಸ್ತುಗಳ ಪೂರೈಕೆಯಾಗಿರಬಹುದು ಇಲ್ಲವೇ ವಸ್ತುಗಳನ್ನು ದುರಸ್ತಿ ಮಾಡುವುದು ಆಗಿರಬಹುದು.
ಗ್ರಾಹಕ ಶಿಕ್ಷಣ ಹಕ್ಕು:
ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಮಾಹಿತಿ ಪಡೆಯುವುದನ್ನು ಇದು ಕಲ್ಪಿಸುತ್ತದೆ. ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಭಾರತ ಸರಕಾರ, ಗ್ರಾಹಕರಿಗೆ ಶಿಕ್ಷಣ, ಶಾಲಾ ಪಠ್ಯದಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಮಾಹಿತಿ ಮತ್ತು ಅನೇಕ ವಿಶ್ವವಿದ್ಯಾಲಯಗಳಲ್ಲಿ ಈ ಬಗ್ಗೆ ಕೋರ್ಸ್ಗಳನ್ನು ಆರಂಭಿಸಲಾಗಿದೆ. ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಸರಕಾರದ ಕರ್ತವ್ಯವಾಗಿದೆ. ಸರಕಾರವೂ ಗ್ರಾಹಕರ ಹಕ್ಕಿನ ಬಗ್ಗೆ ಮಾಹಿತಿ ನೀಡಲು / ಮಾಧ್ಯಮಗಳನ್ನು ಬಳಸಿಕೊಳ್ಳುತ್ತದೆ. ಈ ಮೂಲಕ ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
4. ಪೋಷಕರನ್ನು ಕಡೆಗಣಿಸಿದರೆ 6 ತಿಂಗಳು ಜೈಲು
ಹಿರಿಯ ಪೋಷಕರಿಗೆ ಕಿರುಕುಳ ನೀಡುವ ಹಾಗೂ ಅವರನ್ನು ಮನೆಯಿಂದ ಹೊರದಬ್ಬುವ ಮಕ್ಕಳಿಗೆ ವಿಧಿಸಲಾಗುತ್ತಿದ್ದ ಜೈಲು ಶಿಕ್ಷೆಯನ್ನು ದುಪ್ಪಟ್ಟುಗೊಳಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.
“ಪೋಷಕರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಮತ್ತು ಶ್ರೇಯೋಭಿವೃದ್ಧಿ ಕಾಯಿದೆ 2007” ಪ್ರಕಾರ, ಹಿರಿಯ ಪೋಷಕರನ್ನು ಕಡಗಣಿಸುವ ಮಕ್ಕಳಿಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಶಿಕ್ಷೆ ಪ್ರಮಾಣವನ್ನು ಆರು ತಿಂಗಳಿಗೆ ಹೆಚ್ಚಿಸುವ ಉದ್ದೇಶದಿಂದ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಸಚಿವಾಲಯವು ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಮತ್ತು ಶ್ರೇಯೋಭಿವೃದ್ಧಿ -2018 (ತಿದ್ದುಪಡಿ ವಿಧೇಯಕ) ಕರಡನ್ನು ಸಿದ್ಧಪಡಿಸಿದೆ. ತಿದ್ದುಪಡಿ ವಿಧೇಯಕ ಅಂಗೀಕಾರದ ಬಳಿಕ, ನೂತನ ಕಾಯಿದೆ ಜಾರಿಯಾಗಲಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಗಳು ಹೇಳಿವೆ.
ಕಾನೂನಾತ್ಮಕ ಸಂಕೀರ್ಣತೆಗಳ ನೆಲೆಗಟ್ಟಿನಲ್ಲಿ ಮಲತಾಯಿ/ಮಲತಂದೆ ಮಕ್ಕಳು, ದತ್ತು ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು, ಅಪ್ರಾಪ್ತ ವಯಸ್ಕರು ಪದಗಳ ವ್ಯಾಖ್ಯಾನವನ್ನು ವಿಸ್ತರಿಸುವ ಪ್ರಸ್ತಾವನೆಯೂ ಈ ಕರಡು ವಿಧೇಯಕದಲ್ಲಿದೆ.
ಹಾಗೆಯೇ ‘ನಿರ್ವಹಣೆ’ ಪದದ ವ್ಯಾಖ್ಯಾನವನ್ನೂ ಆಹಾರ, ಬಟ್ಟೆ, ವಸತಿ, ಆರೋಗ್ಯ ಆರೈಕೆ, ಸುಭದ್ರತೆಯ ಅಂಶಗಳಾಚೆಗೂ ವಿಸ್ತರಿಸಬೇಕೆಂಬ ವಿಚಾರವೂ ಅಡಕವಾಗಿದೆ. ನೂತನ ಉದ್ದೇಶಿತ ಕಾಯಿದೆಯ ಕರಡಿನಲ್ಲಿ ತಂದೆ-ತಾಯಿಗೆ ನೀಡಬೇಕಿರುವ ಮಾಸಿಕ ನಿರ್ವಹಣಾ ವೆಚ್ಚದ ಗರಿಷ್ಠ ಮಿತಿ 10,000 ರೂ. ಅನ್ನು ತೆಗೆದುಹಾಕಲಾಗಿದೆ. ಮಕ್ಕಳ ದುಡಿಮೆಯ ಆಧಾರದ ಮೇಲೆ ನಿರ್ದಿಷ್ಟ ನೆಲೆಗಟ್ಟಿನಲ್ಲಿ ಈ ಮೊತ್ತ ನಿರ್ಧರಿಸಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
* ಜೈಲು ಶಿಕ್ಷೆ ಈಗಿರುವ 3ರಿಂದ 6 ತಿಂಗಳಿಗೆ ಏರಿಕೆ
* ಮಾಸಿಕ ನಿರ್ವಹಣಾ ವೆಚ್ಚದ 10,000 ರೂ. ಮಿತಿ ರದ್ದು; ಮಕ್ಕಳ ದುಡಿಮೆ ಆಧಾರದ ಮೇಲೆ ನಿರ್ಧಾರ
* ನಿರ್ವಹಣಾ ಪದದ ವ್ಯಾಪ್ತಿ ವಿಸ್ತರಿಸಲೂ ಚಿಂತನೆ
5. 9 ನೇ ಪರಿಚ್ಛೇದಕ್ಕೆ ಎಸ್ಸಿ, ಎಸ್ಟಿ ಕಾಯ್ದೆ?
ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯೆ (ಎಸ್ಸಿ, ಎಸ್ಟಿ ಕಾಯ್ದೆ) ಅಡಿಯಲ್ಲಿ ದೂರು ದಾಖಲಾದರೆ ಆರೋಪಿಯನ್ನು ತಕ್ಷಣವೇ ಬಂಧಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದುಗೊಳಿಸುವುದ ಕ್ಕಾಗಿ ಸುಗ್ರೀವಾಜ್ಞೆ ತರುವ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸುತ್ತಿದೆ.
ಅಷ್ಟೇ ಅಲ್ಲದೆ, ಈ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆಯೂ ಯೋಚಿಸಲಾಗುತ್ತಿದೆ. ಕಾಯ್ದೆಯನ್ನು ಈ ಪರಿಚ್ಛೇದಕ್ಕೆ ಸೇರಿಸಿದರೆ ಅದನ್ನು ಮತ್ತೆ ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ ಅವಕಾಶ ಇರುವುದಿಲ್ಲ. ಸಂಸತ್ತಿನ ಮುಂಗಾರು, ಅಧಿವೇಶನದಲ್ಲಿ ಈ ಮಸೂದೆ ಮಂಡನೆ ಆಗುವ ಸಾಧ್ಯತೆ ಇದೆ. ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯ ಎಲ್ಲ ಅವಕಾಶಗಳನ್ನು ಮೂಲರೂಪದಲ್ಲಿ ಇದ್ದ ಹಾಗೆಯೇ ಉಳಿಸಿಕೊಳ್ಳಲಾಗುವುದು. ಎಸ್ಸಿ, ಎಸ್ಟಿ ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್ ಮಾರ್ಚ್ನಲ್ಲಿ ನೀಡಿದ್ದ ತೀರ್ಪು ಈ ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ, ಉತ್ತರ ಭಾರತದಾದ್ಯಂತ ನಡೆದ ಪ್ರತಿಭಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.
6. ಈಶಾನ್ಯ ಪೌರತ್ವ ಬಿಕ್ಕಟ್ಟು
ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಮಸೂದೆ (2016)ಗೆ ಮೇಘಾಲಯ ಸರ್ಕಾರ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಅಸ್ಸಾಂ ಕೂಡ ಸ್ಪಷ್ಟ ವಿರೋಧ ತೋರಿದೆ. ಪೌರತ್ವ ಮಸೂದೆ ವಿಚಾರದಲ್ಲಿ ಅಸ್ಸಾಂನ ಹಿತ ಕಾಪಾಡುವುದಕ್ಕೆ ತನ್ನಿಂದ ಆಗದೇ ಹೋದರೆ ಮುಖ್ಯಮಂತ್ರಿ ಸ್ಥಾನ ತ್ಯಜಿಸುವುದಾಗಿ ಕೂಡ ಸರ್ಬಾನಂದ ಸೊನೊವಾಲ್ ಗುವಾಹಟಿ ಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಹೇಳಿಕೊಂಡಿದ್ದಾರೆ. ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಇದಕ್ಕೂ ಮುನ್ನ ಪೌರತ್ವ ಮಸೂದೆ ಬೆಂಬಲಿಸಿದರೆ ಮೈತ್ರಿ ಕಡಿದುಕೊಳ್ಳುವುದಾಗಿ ಅಸ್ವಾಂ ಗಣಪರಿಷದ್ ಎಚ್ಚರಿಸಿತ್ತು.
ಏನಿದು ಮಸೂದೆ?
ಭಾರತದಲ್ಲಿ ನೆಲೆಸಿರುವ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಮಸೂದೆ ಭಾರತದಲ್ಲಿ ನೆಲೆಸಿರುವ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್, ಪಾಕಿಸ್ತಾನಗಳ ಅಲ್ಪಸಂಖ್ಯಾತ ಸಮುದಾಯದ ವಿಶೇಷವಾಗಿ ಹಿಂದು, ಸಿಖ್, ಬೌದ್ಧ, ಜೈನ, ಪಾರಸಿ ಮತ್ತು ಕ್ರಿಶ್ಚಿಯನ್ನರಿಗೆ ಭಾರತದ ಪೌರತ್ವ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ 1955ಕ್ಕೆ ತಿದ್ದುಪಡಿ ತಂದು ‘ಪೌರತ್ವ ತಿದ್ದುಪಡಿ ಮಸೂದೆ 2016’ ಅನ್ನು ಲೋಕಸಭೆಯಲ್ಲಿ 2016ರ ಜುಲೈ 19ರಂದು ಮಂಡಿಸಿತ್ತು. ಇದರ ಪ್ರಕಾರ, ‘ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಸಮುದಾಯದವರು ಭಾರತಕ್ಕೆ ಬಂದು ಕನಿಷ್ಠ ಆರು ವರ್ಷಗಳಾಗಿದ್ದರೆ ಅಂಥವರಿಗೆ ಪೌರತ್ವ ನೀಡಬಹುದು ಎಂಬುದು ತಿದ್ದುಪಡಿಯಲ್ಲಿ ಸೇರ್ಪಡೆಗೊಂಡ ಅಂಶ. ಇಂತಹವರು 11 ವರ್ಷ ಭಾರತದಲ್ಲೇ ವಾಸವಾಗಿದ್ದರೆ, ಅವರಿಗೆ ಭಾರತೀಯ ಪೌರತ್ವ ನೀಡಬಹುದು ಎಂಬುದು ಈಗಿರುವ ನಿಯಮ.
ಜಂಟಿ ಸಂಸತ್ ಸಮಿತಿ ಸಮೀಕ್ಷೆ:
ಬಿಜೆಪಿ ಸಂಸದ ರಾಜೇಂದ್ರ ಅಗರ್ವಾಲ್ ನೇತೃತ್ವದ 16 ಸದಸ್ಯರ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಮೇ 7-9ರ ತನಕ ಅಸ್ಸಾಂನಲ್ಲಿ ಎಲ್ಲ ವರ್ಗ, ಪಂಗಡ, ಜನ ಸಮುದಾಯದವರ ಅಭಿಪ್ರಾಯಗಳನ್ನು ಆಲಿಸಿತ್ತು. ಬೆಂಗಾಳಿ ಪ್ರಾಬಲ್ಯದ ಬರಾಕ್ ಕಣಿವೆ ಪ್ರದೇಶಗಳಲ್ಲಿ ಗರಿಷ್ಠ 315 ಅಭಿಪ್ರಾಯಗಳು ಮಂಡನೆಯಾಗಿದ್ದು, ಎಲ್ಲರೂ ಮಸೂದೆ ಪರ ಒಲವು ತೋರಿದ್ದಾರೆ. ಬ್ರಹ್ಮಪುತ್ರಾ ಕಣಿವೆ ಪ್ರದೇಶದಲ್ಲಿ ಮಸೂದೆ ವಿರೋಧಿಸಿ ಪ್ರತಿಭಟನೆ ಮತ್ತು ಅಭಿಪ್ರಾಯ ವ್ಯಕ್ತವಾಗಿದೆ.
ಅಕ್ರಮ ವಲಸಿಗ ಎಂದರೆ..
ಪೌರತ್ವ ಕಾಯ್ದೆ, 1955ರ ಪ್ರಕಾರ ಸಕ್ರಮವಾದ ಪ್ರವಾಸಿ ದಾಖಲೆಗಳಿಲ್ಲದೆ ಭಾರತಕ್ಕೆ ಬಂದವರು ಅಥವಾ ವೀಸಾ ಅವಧಿ ಮುಗಿದ ನಂತರದಲ್ಲೂ ಭಾರತದಲ್ಲಿ ವಾಸವಾಗಿರುವವರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಕೆಲವು ವರ್ಷಗಳು ಕಳೆದಂತೆ ಈ ವ್ಯಾಖ್ಯಾನದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಯಿತು. ಅದರಂತೆ, 2014ರ ಡಿ.31ರಂದು ಭಾರತದೊಳಗೆ ಅಕ್ರಮವಾಗಿ ಬಂದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿ ಹಲವು ರಾಷ್ಟ್ರಗಳ ಅಲ್ಪಸಂಖ್ಯಾತ ಸಮುದಾಯದವರಿಗೆ ಭಾರತದಲ್ಲಿ ನೆಲೆಸಲು ಅವಕಾಶ ಮಾಡಿಕೊಡಲಾಯಿತು.
ಮೇಘಾಲಯದಲ್ಲೂ ವಿರೋಧ:
ರಾಜ್ಯದಲ್ಲಿ ಸಣ್ಣಸಣ್ಣ ಬುಡಕಟ್ಟು ಜನಾಂಗದವರೇ ಹೆಚ್ಚಾಗಿದ್ದಾರೆ. ತಿದ್ದುಪಡಿ ಮಸೂದೆಯು ಇವರೆಲ್ಲರ ಹಿತಾಸಕ್ತಿಗೆ ಧಕ್ಕೆಯುಂಟು ಮಾಡುತ್ತದೆ ಎಂಬ ಕಾರಣಕ್ಕೆ ಪೌರತ್ವ ತಿದ್ದುಪಡಿ ಮಸೂದೆಗೆ ಮೇಘಾಲಯದಲ್ಲೂ ಭಾರಿ ವಿರೋಧ ವ್ಯಕ್ತವಾಗಿದೆ. ಸಿಎಂ ಕೊನಾರ್ಡ್ ಕೆ ಸಂಗ್ಮಾ ನೇತೃತ್ವದಲ್ಲಿ ನಡೆದ ಮೇಘಾಲಯ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಯನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಲಾಗಿದೆ.
ಅಸ್ಸಾಂನಲ್ಲಿ ವಿರೋಧ ಯಾಕೆ?
ಅಸ್ಸಾಂನ 1985ರ ಒಪ್ಪಂದ ಪ್ರಕಾರ 1971ರ ಮಾರ್ಚ್ 25ರ ನಂತರ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರನ್ನು ಗಡಿಪಾರು ಮಾಡಬೇಕು. ಆದರೆ, ಈ ಹೊಸ ಪೌರತ್ವ ಕಾಯ್ದೆ ಜಾರಿಗೊಂಡರೆ ಈ ಒಪ್ಪಂದದ ಅಂಶ ಉಲ್ಲಂಘನೆಯಾಗುತ್ತದೆ ಎಂಬುದು ಅಸ್ಸಾಂ ಜನರ ವಿರೋಧಕ್ಕೆ ಕಾರಣ.
7. ಗಾಯಕ ಮೋಹಿತ್ ಹಸಿರು ರಾಯಭಾರಿ
ಸಿಕ್ಕಿಂ ಸರ್ಕಾರ ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ರನ್ನು ಹಸಿರು ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ಸಿಕ್ಕಿಂ ಅನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಸಿರ ತಾಣವೆಂದು ಪ್ರಚಾರ ಮಾಡುವ ಸಲುವಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಹಿಮಾಚಲಪ್ರದೇಶದ ನಹಾನ್ನಲ್ಲಿ 1966 ಮಾ.11ರಂದು ಜನಿಸಿದ ಮೋಹಿತ್ ಸಿಲ್ಕ್ ರೂಟ್ ಎಂಬ ಬ್ಯಾಂಡ್ನಿಂದ ಖ್ಯಾತಿ ಪಡೆದವರು. ನಂತರ ರಿಯಾಲಿಟಿ ಶೋಗಳ ಮೂಲಕ ಮುಖ್ಯಭೂಮಿಕೆಗೆ ಬಂದ ಇವರು, 2002ರಲ್ಲಿ ರೋಡ್ ಚಿತ್ರದ ‘ಪೆಹ್ಲಿ ನಜರ್ ಮೇ ದಾರಿ ಥಿ’ ಹಾಡಿನ ಮೂಲಕ ಬಾಲಿವುಡ್ಗೆ ಕಾಲಿಟ್ಟರು. ರಂಗ್ ದೇ ಬಸಂತಿ ಮತ್ತು ದೆಲ್ಲಿ-6 ಚಿತ್ರದ ‘ಖುನ್ ಚಲಾ’ ಮತ್ತು ‘ಮಸಕ್ಕಲಿ’ ಹಾಡು ಇವರನ್ನು ಯಶಸ್ಸಿನ ಉತ್ತುಂಗಕ್ಕೇರಿಸಿತು. ಜಬ್ ವಿ ಮೆಟ್ ಚಿತ್ರದ ‘ತುಮ್ ಸೇ ಹಿ’ ಹಾಡು ಮತ್ತೊಂದು ಹಿಟ್ ನೀಡಿತು. ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಚಿತ್ರದ ‘ಪೀ ಲೂ’ ಹಾಡು ಸೂಪರ್ ಹಿಟ್ ಎನಿಸಿಕೊಂಡಿತು. ಮೋಹಿತ್ ಎರಡು ಬಾರಿ ಫಿಲ್ಮ ಫೇರ್ ಬೆಸ್ಟ್ ಪ್ಲೇ ಬ್ಯಾಕ್ ಸಿಂಗರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
8. ಕೃಷಿ ನೆರವಿಗೆ ರೈತಬಂಧು ಯೋಜನೆ
ತೆಲಂಗಾಣ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಕೃಷಿ ಮಾಡಲು ಸಹಾಯಧನ ನೀಡಲು ‘ರೈತಬಂಧು’ ಎಂಬ ವಿಶೇಷ ಯೋಜನೆ ಜಾರಿಗೊಳಿಸಿದೆ. ಯೋಜನೆಯಡಿ ಶುಷ್ಕ ಭೂಪ್ರದೇಶದ ರೈತರಿಗೆ, ಪ್ರತಿ ಎಕರೆಗೆ ರೂ.8 ಸಾವಿರ ( ಮುಂಗಾರು ಬೆಳೆಗೆ ರೂ.4,000, ಹಿಂಗಾರು ಬೆಳೆಗೆ ರೂ.4,000) ಸಹಾಯಧನ ನೀಡುವ ಯೋಜನೆಗೆ ತೆಲಂಗಾಣ ಸರ್ಕಾರ ಇತ್ತೀಚೆಗಷ್ಟೇ, ಚಾಲನೆ ನೀಡಿದ್ದು, ರಾಜ್ಯದ 1.42 ಕೋಟಿ ಎಕರೆ ಭೂಮಿ ಒಡೆತನ ಹೊಂದಿರುವ ಒಟ್ಟು 58 ಲಕ್ಷಕ್ಕೂ ಹೆಚ್ಚು ರೈತರು ಯೋಜನೆ ಲಾಭ ಪಡೆಯಲಿದ್ದಾರೆ. ಕರೀಂನಗರ ಜಿಲ್ಲೆಯ ಧರ್ಮರಾಜುಪಲ್ಲೆ ಇಂದಿರಾನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ರೈತರೊಬ್ಬರಿಗೆ ಮೊದಲ ಚೆಕ್ ಹಾಗೂ ಪಾಸ್ಬುಕ್ ನೀಡುವ ಮೂಲಕ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಅಧಿಕೃತವಾಗಿ ಯೋಜನೆ ಉದ್ಘಾಟಿಸಿದ್ದಾರೆ. 2018-19ರ ವಾರ್ಷಿಕ ಬಜೆಟ್ನಲ್ಲಿ ಈ ಯೋಜನೆಗೆಂದೇ 12 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಸಾಲಗಾರ ರೈತರಿಗೆ ನೆರವಾಗುವುದೇ ಈ ಯೋಜನೆ ಉದ್ದೇಶವಾಗಿದೆ. ಜತೆಗೆ ಎಲ್ಲ ಬೆಳೆಗಳಿಗೂ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆಯನ್ನು ಶೇ. 25ರಷ್ಟು ಹೆಚ್ಚಿಸಬೇಕು ಎಂದೂ ನಿರ್ಣಯ ಕೈಗೊಳ್ಳಲಾಗಿದೆ.
9. ಭಾರತ- ಪೆರು ನಡುವೆ ಒಪ್ಪಂದ
ಭಾರತ ಮತ್ತು ಪೆರು ನಡುವೆ ನವೀಕರಿಸಬಹುದಾದ ಶಕ್ತಿಯ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇತ್ತೀಚೆಗೆ ಗ್ವಾಟೆಮಾಲಾ, ಪನಾಮಾ ಮತ್ತು ಪೆರು ಪ್ರವಾಸ ಕೈಗೊಂಡಿದ್ದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಪೆರುವಿನ ಲಿಮಾದಲ್ಲಿ ಅಲ್ಲಿನ ಪ್ರಧಾನಿ ಸೆಸಾರ್ ವಿಲಾನು ವೆವಾರನ್ನು ಭೇಟಿಯಾದ ನಾಯ್ಡು ಈ ಬಗ್ಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಮಾತುಕತೆ ಸಂದರ್ಭದಲ್ಲಿ ಔಷಧ, ರಕ್ಷಣೆ, ಎಲ್ ಪಿಜಿ ಪೂರೈಕೆ, ಕೃಷಿ ಮತ್ತು ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗಿತ್ತು. ಬಹುಪಕ್ಷೀಯ ವಿಚಾರಗಳು ಬಂದಾಗ ಪೆರು ಭಾರತಕ್ಕೆ ಪ್ರಮುಖ ದೇಶವಾಗುತ್ತದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವವನ್ನು ಭಾರತಕ್ಕೆ ನೀಡಲು ಪೆರು ಬೆಂಬಲಿಸಿತ್ತು.
10. ಮ್ಯಾನ್ಮಾರ್ ನೊಂದಿಗೆ ಏಳು ಒಡಂಬಡಿಕೆ ಸಪ್ತ ಒಪ್ಪಂದ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎರಡು ದಿನಗಳ ಮ್ಯಾನ್ಮಾರ್ ಪ್ರವಾಸದ ಸಂದರ್ಭ ಭೂಗಡಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದ ಭಾರತ -ಮ್ಯಾನ್ಮಾರ್ ನಡುವಿನ 7 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಶಾಂತಿ, ಭದ್ರತೆ ಹಾಗೂ ಅಭಿವೃದ್ದಿ ಕುರಿತು ಮ್ಯಾನ್ಮಾರ್ ನಾಯಕರನ್ನು ಭೇಟಿಯಾಗಿ ರಾಖಿನೇ ರಾಜ್ಯದ ಅಭಿವೃದ್ಧಿ, ರೋಹಿಂಗ್ಯ ನಿರಾಶ್ರಿತರ ವಾಪಸಾತಿ ಸೇರಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ಉಭಯ ದೇಶಗಳ
ನಡುವಿನ ಮೈತ್ರಿ ಬಲಗೊಳಿಸುವ ಕುರಿತು ಸರ್ಕಾರದ ಕೌನ್ಸೆಲರ್ ಆಂಗ್ ಸಾನ್ ಸೂಕಿ ಜತೆ ಚರ್ಚಿಸಿದರು.
ಏಳು ಒಡಂಬಡಿಕೆ:
1. ಭೂಗಡಿ ದಾಟುವಿಕೆ ಕುರಿತ ಒಪ್ಪಂದ
2. ಬಗಾನ್ನಲ್ಲಿ ಭೂಕಂಪದಿಂದ ಹಾನಿಗೊಳಗಾದ ಪಗೋಡಾಗಳ ಮರುಸ್ಥಾಪನೆ ಹಾಗೂ ಸಂರಕ್ಷಣೆ
3. ಜಂಟಿ ಕದನ ವಿರಾಮ ಮೇಲ್ವಿಚಾರಣಾ ಸಮಿತಿಗೆ ನೆರವು
4. ಮ್ಯಾನ್ಮಾರ್ ವಿದೇಶಾಂಗ ಸೇವೆ ಅಧಿಕಾರಿಗಳಿಗೆ ತರಬೇತಿ
5. ಮೊನಿವಾದಲ್ಲಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಸಿ) ಸ್ಥಾಪನೆ
6. ಥಾಟನ್ ನಲ್ಲಿ ಕೈಗಾರಿಕಾ ತರಬೇತಿ ಕೇಂದ್ರ
7. ಮಿಂಗ್ಯಾನ್ನಲ್ಲಿರುವ ಕೈಗಾರಿಕಾ ತರಬೇತಿ ಕೇಂದ್ರದ ನಿರ್ವಹಣಾ ಒಪ್ಪಂದ ಮುಂದುವರಿಕೆ
ವಿದೇಶ
1. ಕ್ಸಿ ಜಿನ್ಪಿಂಗ್ : ಪ್ರಭಾವಶಾಲಿ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಥಮ ಸ್ಥಾನ
ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ 2018ರ ಹೆಚ್ಚು ಪ್ರಭಾವಶಾಲಿ ಜಾಗತಿಕ ನಾಯಕರ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ 9ನೇ ಸ್ಥಾನ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನ ಪಡೆದಿರುವ ಕ್ಸಿ ಜಿನ್ಪಿಂಗ್ ಅವರು ಕಳೆದ ವರ್ಷ ಎರಡನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ವಿಶ್ವದಲ್ಲಿ ಅತಿ ದೀರ್ಘ ಕಾಲ ಆಡಳಿತ ನಡೆಸುತ್ತಿರುವ ಕಮ್ಯುನಿಸ್ಟ್ ಪಕ್ಷದ ಸಂವಿಧಾನದಲ್ಲಿ ಇದುವರೆಗೂ ಮಾವೋ ಹಾಗೂ ಡೆಂಗ್ ಕ್ಸಿಯೋ ಪಿಂಗ್ ಅವರ ಚಿಂತನೆಗಳು ಹಾಗೂ ಹೆಸರು ಮಾತ್ರ ಇದ್ದವು. ಇವರ ಸಾಲಿಗೆ ಕ್ಸಿ ಜಿನ್ಪಿಂಗ್ ಸಹ ಸೇರಿದ್ದಾರೆ. ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷನಾಗಿ, ರಾಷ್ಟ್ರಾಧ್ಯಕ್ಷರಾಗಿ, ಸೇನಾನಾಯಕರಾಗಿ ಕಳೆದ 5-6 ವರ್ಷಗಳಲ್ಲಿ ಅತ್ಯಂತ ಪ್ರಬಲ ನಾಯಕ ಎಂದು ಜಿನ್ ಪಿಂಗ್ ಬಿಂಬಿತವಾಗಿದ್ದಾರೆ. ಎರಡನೇ ವಿಶ್ವಯುದ್ಧದ ಬಳಿಕ ಹುಟ್ಟಿದ ಮೊದಲ ಅಧ್ಯಕ್ಷರಾದ ಕ್ಸಿ ಜಿನ್ಪಿಂಗ್ ಜನಿಸಿದ್ದು 1953ರ ಜೂನ್ 15ರಂದು . ಇವರು ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸೆಂಟ್ರಲ್ ಮಿಲಿಟರಿ ಕಮಿಷನ್ನ ಚೇರ್ಮನ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
2. ಬ್ರಿಟನ್ ಶ್ರೀಮಂತರ ಪಟ್ಟಿ: ಹಿಂದುಜಾ ಸಹೋದರರಿಗೆ ಸ್ಥಾನ
ಬ್ರಿಟನ್ನ ಶ್ರೀಮಂತರ ಪಟ್ಟಿಯಲ್ಲಿ ಭಾರತ ಮೂಲದ ಹಿಂದುಜಾ ಸಹೋದರರು ಎರಡನೇ ಸ್ಥಾನ ಗಳಿಸಿದ್ದಾರೆ. ರಾಸಾಯನಿಕ ವ್ಯವಹಾರಗಳ ಉದ್ಯಮಿ ಜಿಮ್ ರಾಟ್ ಕ್ಲಿಫ್ ಅವರು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಲಂಡನ್ನಲ್ಲಿ ನೆಲೆಸಿರುವ ಶ್ರೀಚಂದ್ ಮತ್ತು ಗೋಪಿಚಂದ್ ಹಿಂದುಜಾ ಸಹೋದರರು 11.87 ಲಕ್ಷ ಕೋಟಿ ಆಸ್ತಿ ಹೊಂದಿದ್ದು, ರಾಟ್ ಕ್ಲಿಫ್ ಅವರು 1.91 ಲಕ್ಷ ಕೋಟಿ ಆಸ್ತಿ ಹೊಂದಿದ್ದಾರೆ ಎಂದು ‘ಸಂಡೆ ಟೈಮ್ಸ್ ರಿಚ್ ಲಿಸ್ಟ್’ ನಲ್ಲಿ ತಿಳಿಸಲಾಗಿದೆ. ಬ್ರಿಟನ್ನ 1ಸಾವಿರ ಮಂದಿ ಶ್ರೀಮಂತರ ಪಟ್ಟಿಯಲ್ಲಿ 47 ಮಂದಿ ಭಾರತೀಯ ಮೂಲದವರು.
3. ಚೀನಾ ಸೇನೆ ಗೆ ಬಂತು ನೌಕಾ ಬಲ
ಚೀನಾದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ತನ್ನ ಪರೀಕ್ಷಾರ್ಥ ಕಾರ್ಯ ಆರಂಭಿಸಿದೆ. ಈ ವಿಮಾನವಾಹಕ ನೌಕೆ 50,000 ಮೆಟ್ರಿಕ್ ಟನ್ ತೂಕವಿದ್ದು, ಅನೇಕ ಶಕ್ತಿಶಾಲಿ ನಾವೆಗಳ ಸಹಾಯದಿಂದ ಸಮುದ್ರಕ್ಕೆ ಬಿಡಲಾಯಿತು. ಇದು ಚೀನಾದ ಎರಡನೇ ವಿಮಾನವಾಹಕ ನೌಕೆಯಾಗಿದ್ದು ಚೀನಾದಲ್ಲೇ ಸಂಪೂರ್ಣವಾಗಿ ನಿರ್ಮಿಸಿ ವಿನ್ಯಾಸಗೊಳಿಸಿದ ಮೊದಲ ವಿಮಾನವಾಹಕ ನೌಕೆಯಾಗಿದೆ. ಇದು 2020ರೊಳಗೆ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ. ನೌಕಾಪಡೆಯ ವಿಶ್ವಾಸಾರ್ಹತೆ ಮತ್ತು ಸಾಮರ್ಥ್ಯ ಪ್ರದರ್ಶಿಸಲು ಈ ಪ್ರಯೋಗಾರ್ಥ ನೌಕಾ ಪರೀಕ್ಷೆ ಸಹಾಯವಾಗಲಿದೆ ಎಂದು ಚೀನಾ ನೌಕಾಪಡೆ ಹೇಳಿದೆ.
2012ರಲ್ಲಿ ಸೋವಿಯತ್ ಯೂನಿಯನ್ ಸಹಯೋಗದೊಂದಿಗೆ ಮೊದಲ ಬಾರಿಗೆ ‘ಲಿಯನಿಂಗ್’ ಹೆಸರಿನ ವಿಮಾನ ವಾಹಕ ನೌಕೆಯನ್ನು ಚೀನಾ ಅಭಿವೃದ್ಧಿ ಪಡಿಸಿತು. ‘ಲಿಯನಿಂಗ್’ ಅನ್ನು ಸಂಶೋಧನೆ ಮತ್ತು ಹೊಸ ವಾಹಕಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಅಲ್ಲದೆ, ಶಾಂಘೈ ನಲ್ಲಿ ಮೂರನೇ ವಿಮಾನವಾಹಕ ನೌಕೆಯನ್ನು ನಿರ್ಮಿಸುತ್ತಿದೆ. 2030ರ ವೇಳೆಗೆ ಇನ್ನೂ ನಾಲ್ಕು ವಿಮಾನವಾಹಕ ನೌಕೆಯನ್ನು ತಯಾರಿಸಲು ಯೋಜನೆ ರೂಪಿಸಿದೆ.
ಸದ್ಯ ಭಾರತ, ಅಮೆರಿಕ, ರಷ್ಯಾ, ಫ್ರಾನ್ಸ್, ಬ್ರಿಟನ್, ಇಟಲಿ, ಥಾಯ್ಲೆಂಡ್ ಮತ್ತು ಚೀನಾ ದೇಶಗಳು ಮಾತ್ರ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯನ್ನು ಹೊಂದಿವೆ. ವಿಶ್ವದಲ್ಲಿ ಒಟ್ಟು 18 ವಿಮಾನವಾಹಕ ನೌಕೆಗಳು ಕಾರ್ಯನಿರ್ವಹಿಸುತ್ತಿವೆ. ಅಮೆರಿಕ ಅತಿ ಹೆಚ್ಚು ವಿಮಾನವಾಹಕ ನೌಕೆಯನ್ನು ಹೊಂದಿದ್ದು, ಪರಮಾಣು ಚಾಲಿತ ವಿಮಾನವಾಹಕ ನೌಕೆಗಳು ಕಾರ್ಯನಿರ್ವಹಿಸುತ್ತಿವೆ.
* 50,000 ಮೆಟ್ರಿಕ್ ಟನ್: ವಿಮಾನವಾಹಕ ನೌಕೆಯ ತೂಕ
* 3,600 ಒಟ್ಟು ಕ್ಯಾಬಿನ್ ಗಳು
* 3000 ನೌಕರರು ನೌಕೆ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ.
ದೇನಾ ಬ್ಯಾಂಕ್ ಮೇಲೆ ಪಿಸಿಎ ಹೇರಿಕೆ
ರಿಸರ್ವ್ ಬ್ಯಾಂಕ್ ದೇನಾ ಬ್ಯಾಂಕ್ ಮೇಲೆ ಕ್ಷಿಪ್ರ ದೋಷ ಪರಿಹಾರಕ ಕ್ರಮ (prompt corrective action) ಕ್ರಮ ಕೈಗೊಂಡಿದೆ. ಸಾರ್ವಜನಿಕ ಸ್ವಾಮ್ಯದ ದೇನಾ ಬ್ಯಾಂಕ್ನಲ್ಲಿ ಪಾವತಿಯಾಗದಿರುವ ಸಾಲದ ಪ್ರಮಾಣ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಕೈಗೊಳ್ಳಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಇದರಿಂದ ಬ್ಯಾಂಕ್ ಹೊಸದಾಗಿ ಸಾಲ ನೀಡುವುದಕ್ಕಾಗಲಿ, ಹೊಸನೇಮಕಾತಿ ಮಾಡಿಕೊಳ್ಳುವುದಕ್ಕಾಗಲಿ ಅವಕಾಶ ಇರುವುದಿಲ್ಲ.
ಪಿಸಿಎ ಎಂದರೇನು?:
ಬ್ಯಾಂಕ್ಗಳು ನಷ್ಟದ ಕೂಪಕ್ಕೆ ಸಾಗುತ್ತಿವೆ ಎಂಬುದು ಗಮನಕ್ಕೆ ಬಂದಾಗ ಇವುಗಳ ನಿಯಂತ್ರಕ ಸಂಸ್ಥೆ ತೆಗೆದುಕೊಳ್ಳುವ ಕ್ರಮವನ್ನು ಪಿಸಿಎ ಅಂದರೆ ಕ್ಷಿಪ್ರ ದೋಷಪರಿಹಾರಕ ಕ್ರಮ ಎಂದು ಹೇಳಲಾಗುತ್ತದೆ. ಅಂದರೆ ಬ್ಯಾಂಕ್ನ ಮೇಲೆ ಕೆಲ ನಿರ್ಬಂಧಗಳನ್ನು , ಹೇರಲಾಗುತ್ತದೆ. ಉದಾಹರಣೆಗೆ ಬ್ರಾಂಚ್ನ ವಿಸ್ತರಣೆಗೆ ತಡೆ, ಲಾಭಾಂಶಪಾವತಿಗೆ ತಡೆ, ಸಾಲ ನೀಡುವಿಕೆ ಮುಂತಾದವುಗಳಿಗೆ ನಿಯಂತ್ರಣ ಹೇರಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಸ್ಪೆಷಲ್ ಆಡಿಟ್, ಕಾರ್ಯಾಚರಣೆಯನ್ನು ಪುನರ್ ರಚನೆ ಮಾಡುವುದು, ಸಾಲ ಮರುಪಡೆಯುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು, ಹೊಸ ನಿರ್ವಹಣಾ ತಂಡ ರಚನೆಗೆ ಸಲಹೆ ನೀಡಬಹುದು. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಗಿರುವುದರಿಂದ ರಿಸರ್ವ್ ಬ್ಯಾಂಕ್ ಬ್ಯಾಂಕ್ನ ಮಂಡಳಿ ಯಲ್ಲೂ ಹಸ್ತಕ್ಷೇಪ ಮಾಡುವ ಅವಕಾಶವಿರುತ್ತದೆ.
ಪಿಸಿಎ ಅಗತ್ಯ ಯಾವಾಗ ಬರುತ್ತದೆ?:
ಬ್ಯಾಂಕ್ಗಳ ಮೇಲೆ ಇಂತಹ ನಿರ್ಬಂಧಗಳನ್ನು ಹೇರುವುದಕ್ಕೆ ಕೆಲವು ವಿಚಾರಗಳನ್ನು ಮಾನದಂಡಗಳನ್ನಾಗಿ ಪರಿಗಣಿ ಸಲಾಗುತ್ತದೆ. ಮುಖ್ಯವಾಗಿ ಆಸ್ತಿ ಗುಣಮಟ್ಟ, ಲಾಭ ಮತ್ತು ಬಂಡವಾಳ ಇದರ ನಡುವಿನ ಸಮತೋಲನವನ್ನು ಗಮನಿಸುತ್ತದೆ. ಇನ್ನೂ ಕೆಲ ಸಂದರ್ಭಗಳಲ್ಲಿ ಮರುಪಾವತಿಯಾಗದ ಸಾಲ ಶೇ.12ರಷ್ಟು ಇದ್ದಲ್ಲಿ ಮತ್ತು ಸತತ ನಾಲ್ಕು ವರ್ಷಗಳ ಕಾಲ ಬ್ಯಾಂಕ್ ನಷ್ಟದಲ್ಲೇ ಸಾಗುತ್ತಿದ್ದ ಸಂದರ್ಭಗಳಲ್ಲೂ ಪಿಸಿಎ ಅನ್ನು ಜಾರಿಗೆ ತರಲಾಗುತ್ತದೆ.
ಎಷ್ಟು ವಿಧದ ನಿರ್ಬಂಧಗಳಿರುತ್ತವೆ? :
ಪಿಸಿಎ ಅಲ್ಲಿ ಎರಡು ಬಗೆಯ ನಿಯಂರ್ತಣಗಳನ್ನು ಹೇರಲಾಗುತ್ತದೆ. ಕಡ್ಡಾಯ ಮತ್ತು ವಿವೇಚನೆಗೆ ಬಿಟ್ಟ ಎನ್ನುವ ಎರಡು ವಿಭಾಗಗಳಲ್ಲಿ ನಿಯಂತ್ರಣ ಹೇರಲಾಗು ಲಾಭಾಂಶ, ಬ್ರಾಂಚ್ ವಿಸ್ತರಣೆ, ನಿರ್ದೇಶಕರ ಪರಿಹಾರ ಇವೆಲ್ಲವೂ ಕಡ್ಡಾಯವಾಗಿ ಪಾಲಿಸಲೇಬೇಕಾದ ನಿರ್ಬಂಧಗಳು. ಸಾಲ ಮತ್ತು ಠೇವಣಿಗೆ ಸಂಬಂಧಿಸಿದ ನಿಯಂತ್ರಣಗಳು ವಿವೇಚನೆಗೆ ಬಿಟ್ಟದ್ದಾಗಿರುತ್ತದೆ. ನೂತನ ಮಾನದಂಡಗಳ ರಚನೆ ಬಳಿಕ ಇಲ್ಲಿಯವರೆಗೆ ಐಡಿಬಿಐ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್ಗೆ ಮಾತ್ರವೇ ಕಡ್ಡಾಯ ನಿರ್ಬಂಧಗಳನ್ನು ಹೇರಲಾಗಿತ್ತು. ಸತತ ನಾಲ್ಕು ವರ್ಷಗಳ ಕಾಲ ನಷ್ಟದಲ್ಲೇ ಇದ್ದಿದ್ದು ಇದಕ್ಕೆ ಕಾರಣವಾಗಿತ್ತು.
ಬ್ಯಾಂಕ್ಗಳು ಏನು ಮಾಡುತ್ತವೆ?:
ಭಾರಿ ಪ್ರಮಾಣದ ಠೇವಣಿ ಪಡೆದು ಕೊಳ್ಳಲು ಮತ್ತು ನವೀಕರಣಕ್ಕೆ ಅವಕಾಶವಿರುವುದಿಲ್ಲ. ಶುಲ್ಕ ಆಧಾರಿತ ಆದಾಯ ಹೆಚ್ಚಳಕ್ಕೆ ಕ್ರಮ ಮರುಪಾವತಿಯಾಗದ ಸಾಲ ಪ್ರಮಾಣವನ್ನು ಇಳಿಕೆ ಮಾಡಲು ಬ್ಯಾಂಕ್ಗಳು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೊಸ ರೀತಿಯ ಉದ್ಯಮಗಳನ್ನು ನಡೆಸುವುದಕ್ಕೆ ಅವಕಾಶ ಇರುವುದಿಲ್ಲ. ಬೇರೆ ಬ್ಯಾಂಕ್ಗಳಿಂದಲೂ ಸಾಲ ಪಡೆದುಕೊಳ್ಳುವುದಕ್ಕೆ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಬಹುದಾಗಿದೆ.
ಪರಿಣಾಮ:
ರಿಸರ್ವ್ ಬ್ಯಾಂಕ್ ತೆಗೆದುಕೊಳ್ಳುವ ಈ ಕ್ರಮದಿಂದ ಸಣ್ಣಪುಟ್ಟ ಬ್ಯಾಂಕ್ಗಳು ಭಾರಿ ಸಂಕಷ್ಟಕ್ಕೆ ಬೀಳಬಹುದು. ಅವರಿಗೆ ಎದುರಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಅವರಿಗೆ ಅವಕಾಶವೇ ಇಲ್ಲ ಎನ್ನುವ ಹಾಗೆ ಆಗಬಹುದು. ಬ್ಯಾಂಕ್ ಸಾಲ ನೀಡದಿರುವುದು ಮತ್ತು ವಿನಾ ಕಾರಣ ಶುಲ್ಕ ಹೆಚ್ಚಳದಿಂದ ಗ್ರಾಹಕರ ಪ್ರಮಾಣದಲ್ಲಿ ಇಳಿಕೆಯಾಗುವ ಆತಂಕವಿರುತ್ತದೆ.