13 ನೇ ನವಂಬರ್, 2018-ಪ್ರಚಲಿತ ಘಟನೆಗಳು
ರಾಜ್ಯ
1. ಹೇಮಂತ ಜೋಶಿಗೆ ಪುಟ್ಟ ಶ್ರೀ ಸಮಾನ
- ನಗರದ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ವತಿಯಿಂದ ಪದ್ಮಭೂಷಣ ಡಾ.ಪಂಡಿತ್ ಪುಟ್ಟರಾಜ ಗವಾಯಿ ಹೆಸರಿನಲ್ಲಿ ನೀಡಲಾಗುವ 2018ನೇ ಸಾಲಿನ ‘ಪುಟ್ಟ ಶ್ರೀ ಸಮ್ಮಾನ’ ಪ್ರಶಸ್ತಿಗೆ ಧಾರವಾಡದ ಹೇಮಂತ ಜೋಶಿ ಆಯ್ಕೆಯಾಗಿದ್ದಾರೆ.
- ಬಾಲ ಕಲಾವಿದನಾಗಿ ಅಪ್ರತಿಮ ಸಾಧನೆ ಮಾಡುತ್ತಿರುವ ಹೇಮಂತ, ಈಗಾಗಲೇ ದೇಶದ ಹಲವು ಪ್ರತಿಷ್ಠಿತ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾರೆ.
ರಾಷ್ಟ್ರೀಯ
1. ನಪುಂಸಕ ಎಂದು ದೂಷಿಸಿದರೆ ಮಾನಹಾನಿ ಮೊಕದ್ದಮೆ!
- ಯಾವುದೇ ವ್ಯಕ್ತಿಯನ್ನು ಇನ್ನು ಮುಂದೆ ‘ನಪುಂಸಕ’ ಅಥವಾ ‘ಷಂಡ’ ಎಂದು ದೂಷಿಸುವ ಮುನ್ನ ಕೊಂಚ ಯೋಚಿಸುವುದು ಒಳಿತು.
- ಏಕೆಂದರೆ, ‘ಷಂಡ’ ಎಂಬ ಪದ ಪ್ರಯೋಗವು ಮಾನಹಾನಿಗೆ ಸಮಾನವಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ನಾಗುರ ಪೀಠ ಮಹತ್ವದ ತೀರ್ಪು ನೀಡಿದೆ.
- ಅಲ್ಲದೆ, ಈ ರೀತಿಯ ದೂಷಣೆಯಿಂದ ಪುರುಷಾವಸ್ಥೆಯನ್ನು ಪ್ರತಿಕೂಲವಾಗಿ ಬಿಂಬಿಸುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
- ಗಂಡನನ್ನು ನಪುಂಸಕ ಎಂದು ದೂಷಿಸಿದ ಪತ್ನಿಯ ವಿರುದ್ದ ಆತ ದಾಖಲಿಸಿರುವ ದೂರಿನ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಮತ ವ್ಯಕ್ತಪಡಿಸಿದೆ.
- “ನಪುಂಸಕತ್ವದ ಕಾರಣ ನೀಡಿ ವಿಚ್ಚೇದನ ಬಯಸುವ ಮಹಿಳೆಯರ ವಿರುದ್ಧ ಕಾನೂನು ಸಮರ ನಡೆಸುವ ಪುರುಷರಿಗೆ ಈ ತೀರ್ಪು ವರದಾನವಾಗಲಿದೆ.
ಮಾನಹಾನಿ ಹೇಗೆ?
- ”ಮೇಲ್ನೋಟಕ್ಕೆ ಷಂಡ (ನಪುಂಸಕ) ಎಂಬ ಪದವನ್ನು ವ್ಯಾಕರಣಬದ್ದವಾಗಿ ಅರ್ಥೈಸುವುದಾದರೆ, ಅದು ವ್ಯಕ್ತಿಯೊಬ್ಬನ ಪುರುಷತ್ವವನ್ನು ಪ್ರತಿಕೂಲವಾಗಿ ಬಿಂಬಿಸುತ್ತದೆ.
- ಇದು ಆತನನ್ನು ಇತರರು ಭಿನ್ನವಾಗಿ ನೋಡಲು ಕಾರಣವಾಗುತ್ತದೆ.
- ಇದರ ಅನ್ವಯ ಇಂಥ ಪದ ಬಳಕೆ ಮಾಡುವುದು ಭಾರತೀಯ ದಂಡಸಂಹಿತೆ ಸೆಕ್ಷನ್ 499ರ ಅನ್ವಯ ಮಾನಹಾನಿಕರವಾಗುತ್ತದೆ ಹಾಗೂ ಸೆಕ್ಷನ್ 500ರ ಅನ್ವಯ ಇದಕ್ಕೆ ಶಿಕ್ಷೆ ವಿಧಿಸಬಹುದಾಗಿದೆ,” ಎಂದು ನ್ಯಾಯಮೂರ್ತಿ ಸುನೀಲ್ ಶುರ್ಕೆ ಅವರ ನೇತೃತ್ವದ ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ.
ಯಾವ ಕೇಸ್ನಲ್ಲಿ ಈ ತೀರ್ಪು:
- ಮಹಾರಾಷ್ಟ್ರ ಮೂಲದ ದಂಪತಿ 2016ರಲ್ಲಿ ವೈಮನಸ್ಸು ಮೂಡಿತ್ತು. ಪತ್ನಿ ಗಂಡನನ್ನು ದೂಷಿಸಿ ತವರು ಮನೆಗೆ ಹೋಗಿದ್ದಲ್ಲದೆ, ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು.
- ನ್ಯಾಯಾಲಯ ದಂಪತಿಗೆ ಜನಿಸಿದ ಹೆಣ್ಣುಮಗುವಿನ ಪೋಷಣೆ ಹೊಣೆಯನ್ನು ಪತಿಗೆ ವಹಿಸಿತ್ತು.
- ಅರ್ಜಿಯಲ್ಲಿ ಗಂಡನನ್ನು ನಪುಂಸಕ ಎಂದು ಹೇಳಿದ್ದ ಪತ್ನಿ, ಆಧುನಿಕ ವೈದ್ಯಕೀಯ ಪದ್ಧತಿಗಳ ನೆರವಿನಿಂದ ಮಗುವನ್ನು ಪಡೆದಿದ್ದಾಗಿ ತಿಳಿಸಿದ್ದರು.
- ಆದರೆ ಪತ್ನಿ ಆರೋಪ ನಿರಾಕರಿಸಿದ್ದ ಪತಿ, ತನ್ನನ್ನು ‘ಷಂಡ” ಎಂದು ಕರೆದಿದ್ದಕ್ಕಾಗಿ ಪತ್ನಿ ಹಾಗೂ ಭಾವ ಮೈದುನರ ವಿರುದ್ಧವೇ ಕೇಸ್ ಹಾಕಿದ್ದರು.
- ಸಾಕ್ಷಾಧಾರಗಳ ಪರಿಶೀಲನೆ ನಂತರ ನ್ಯಾಯಾಲಯ ಪತ್ನಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸಿತ್ತು.
2. ಸೆಕ್ಷನ್ 375ರಲ್ಲಿ ಲಿಂಗಭೇದ: ಅರ್ಜಿ ವಿಚಾರಣೆಗೆ ನಕಾರ.
- ಭಾರತೀಯ ಅಪರಾಧ ಸಂಹಿತೆಯ (ಐಪಿಸಿ) ಸೆಕ್ಷನ್ 375ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
- ಅತ್ಯಾಚಾರಕ್ಕೆ ಸಂಬಂಧಿಸಿದ ಈ ಕಾಯ್ದೆಯು ‘ಲಿಂಗ ತಟಸ್ಥ’ ಅಲ್ಲ ಎಂದು ಪ್ರತಿಪಾದಿಸಿ ಅರ್ಜಿ ಸಲ್ಲಿಸಲಾಗಿತ್ತು. “ಅರ್ಜಿಯಲ್ಲಿನ ವಿಷಯ ಶಾಸನಕ್ಕೆ ಸಂಬಂಧಿಸಿದ್ದು.
- ಹೀಗಾಗಿ, ಇದು ಸಂಸತ್ ವ್ಯಾಪ್ತಿಗೆ ಒಳಪಡುವುದರಿಂದ ನಾವು ಏನನ್ನೂ ಹೇಳುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರನ್ನೊಳಗೊಂಡ ಪೀಠವು ತಿಳಿಸಿದೆ.
- ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸುವುದನ್ನು ಸೆಕ್ಷನ್ 376ರಲ್ಲಿ ಪ್ರಸ್ತಾಪಿಸಲಾಗಿದೆ. ಪುರುಷರು ಮತ್ತು ತೃತೀಯ ಲಿಂಗಿಗಳ ಮೇಲೆ ನಡೆಯುವ ಅತ್ಯಾಚಾರದ ಬಗ್ಗೆ ಈ ಸೆಕ್ಷನ್ ಒಳಗೊಂಡಿಲ್ಲ ಎಂದು ಸರ್ಕಾರೇತರ ಸಂಸ್ಥೆ ಕ್ರಿಮಿನಲ್ ಜಸ್ಟಿಸ್ ಸೊಸೈಟಿ ಆಫ್ ಇಂಡಿಯಾ ಪರ ವಕೀಲ ಅಶೀಮಾ ಮಂಗ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
- ಸಂತ್ರಸ್ತೆಯರಿಗೆ ಮಾತ್ರ ಈ ಸೆಕ್ಷನ್ ಅನ್ವಯವಾಗುತ್ತಿದ್ದು, ಪುರುಷನನ್ನು ಅಪರಾಧಿಗಳಂತೆ ಪರಿಗಣಿಸಲಾಗಿದೆ.
- ಆದರೆ ಮಹಿಳೆಯಿಂದ ಮಹಿಳೆ ಮೇಲೆ, ಪುರುಷನ ಮೇಲೆ ಮತ್ತೊಬ್ಬ ಪುರುಷ ಮತ್ತು ತೃತೀಯ ಲಿಂಗಿ ಮೇಲೆ ತೃತೀಯ ಲಿಂಗಿ ನಡೆಸುವ ಸಮ್ಮತವಲ್ಲದ ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರಸ್ತಾಪಿಸುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
3. ಅನುಪಮ್ ಖೇರ್ ಬಾಲಿವುಡ್ ನಟ
- ಖ್ಯಾತ ಬಾಲಿವುಡ್ ನಟ ಅನುಪಮ್ ಬೇರೆ ಅವರು ಪ್ರತಿಷ್ಠಿತ ಡಿಸ್ಟಿಂಗ್ವಿಷ್ಟ್ ಫೆಲೊ ಗೌರವಕ್ಕೆ ಭಾಜನರಾಗಿದ್ದಾರೆ.
- 1990ರಲ್ಲಿ ಇವರು ನಟಿಸಿದ ಡ್ಯಾಡಿ ಚಿತ್ರ ಹಾಗೂ 2006ರಲ್ಲಿ ಮೈ ಗಾಂಧಿ ಕೊ ನಹಿ ಮಾರಾ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಂದಿವೆ.
- ಇವರ ಚಲನಚಿತ್ರ ಸೇವೆಯನ್ನು ಗುರುತಿಸಿ ಭಾರತ ಸರಕಾರ 2004ರಲ್ಲಿ ಪದ್ಮಶ್ರೀ ಹಾಗೂ 2016ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
- ಅನುಪಮ್ ಖೇರ್ ಮಾರ್ಚ್ 1, 1955ರಲ್ಲಿ ಹಿಮಾಚಲ ಪ್ರದೇಶದ ಸಿಮ್ಲಾದಲ್ಲಿ ಜನಿಸಿದರು.
ಅಂತರರಾಷ್ಟ್ರೀಯ
1. ಬಿತ್ತನೆ ಬೀಜ ಉತ್ಪಾದನೆಯಲ್ಲಿ ಭಾರತಕ್ಕೆ ಅಗ್ರ ಸ್ಥಾನ
- ಬಿತ್ತನೆ ಬೀಜಗಳ ಉತ್ಪಾದನೆಯಲ್ಲಿ ಭಾರತವು ಏಷ್ಯಾದಲ್ಲಿಯೇ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. 24 ಪ್ರತಿಷ್ಠಿತ ಜಾಗತಿಕ ಬಿತ್ತನೆ ಬೀಜಗಳ ಕಂಪನಿಗಳ ಪೈಕಿ 18 ಕಂಪನಿಗಳು ಭಾರತದಲ್ಲಿ ತಳಿ ಅಭಿವೃದ್ಧಿ ಹಾಗೂ ಉತ್ಪಾದನಾ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿವೆ ಎಂದು ವಿಶ್ವಸಂಸ್ಥೆಯ ನಿರ್ದೇಶನದಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ.
- ಬೀಜ ಉತ್ಪಾದನಾ ವಲಯದ ಪ್ರಮುಖ 24 ಕಂಪನಿಗಳ ಮೌಲ್ಯಮಾಪನ ನಡೆಸಿದ್ದು 21 ಕಂಪನಿಗಳು ಭಾರತದಲ್ಲಿ ಬಿತ್ತನೆ ಬೀಜ ಮಾರಾಟ ನಡೆಸುತ್ತಿವೆ.
- 18 ಕಂಪನಿಗಳು ತಳಿ ಅಭಿವೃದ್ಧಿ ಹಾಗೂ ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿವೆ ಎಂದು ದಕ್ಷಿಣ ಮತ್ತು ಆಗ್ನೇಯ ಏಷ್ಯಾ (ಎಎಸ್ಐ) ಬೀಜ ಸೂಚ್ಯಂಕದ ಆಧಾರದ ಮೇಲೆ ವಿಶ್ವ ಬೆಂಚ್ಮಾರ್ಕಿಂಗ್ ಅಲಿಯನ್ಸ್ (ಡಬ್ಲೂಬಿಎ) ಅಧ್ಯಯನ ವರದಿ ಪ್ರಕಟಿಸಿದೆ.
- ಇದೇ ಮೊದಲ ಬಾರಿ ಬೀಜ ಸೂಚ್ಯಂಕ ಪ್ರಕಟಗೊಂಡಿದ್ದು ಭಾರತದ ಅದ್ವಂತಾ, ಆಕ್ಸನ್ ಹೈವೆಗ್, ನಾಮಧಾರಿ ಸೀಡ್ಸ್ ಮತ್ತು ನುಜಿವೀಡು ಸೀಡ್ಸ್ ಕಂಪನಿ 10 ಜಾಗತಿಕ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
- ಥಾಯ್ಲೆಂಡ್ ಮೂಲದ ಈಸ್ಟ್-ವೆಸ್ಟ್ ಸೀಡ್ ಕಂಪನಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
- ಥಾಯ್ಲೆಂಡ್ನಲ್ಲಿ 11 ಮತ್ತು ಇಂಡೋನೇಷ್ಯಾದಲ್ಲಿ ಎಂಟು. ಕಂಪನಿಗಳು ತಳಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿವೆ.
- ಮುಖ್ಯಾಂಶಗಳು ದೇಶದಲ್ಲಿ 18 ಕಂಪನಿಗಳಿಂದ ತಳಿ ಅಭಿವೃದ್ಧಿ ಚಟುವಟಿಕೆ ಥಾಯ್ಲೆಂಡ್ ಮೂಲದ ಈಸ್ಟ್-ವೆಸ್ಟ್ ಸೀಡ್ ಕಂಪನಿ ಪಟ್ಟಿಯಲ್ಲಿ ಅಗ್ರ ಬೆಳೆ ಇಳುವರಿ ಹೆಚ್ಚಿಸಲು ದೊಡ್ಡ ಪ್ರಮಾಣದಲ್ಲಿ ಕಂಪನಿಗಳಿಂದ ಹೂಡಿಕೆ ಮಾಡಿದೆ.
2. ಭಾರತದ ರಾಯಭಾರಿ: ನೀಲಾಂಬರ್ ಹೆಸರು ಸೂಚಿಸಿದ ನೇಪಾಳ
- ಮಾಜಿ ಕಾನೂನು ಸಚಿವ ಹಾಗೂ ಹಿರಿಯ ರಾಜಕಾರಣಿ ನೀಲಾಂಬರ್ ಆಚಾರ್ಯ ಅವರನ್ನು ಭಾರತದ ರಾಯಭಾರಿಯಾಗಿ ನೇಪಾಳ ಸರ್ಕಾರ ನೇಮಕ ಮಾಡಿದೆ.
- ಕಳೆದ ವರ್ಷ ಅಕ್ಟೋಬರ್ನಲ್ಲಿ ದೀಪ್ ಕುಮಾರ್ ಉಪಾಧ್ಯಾಯ ಅವರು ರಾಜೀನಾಮೆ ನೀಡಿದ ನಂತರ ಈ ಸ್ಥಾನ ತೆರವಾಗಿತ್ತು.
- ನೀಲಾಂಬರ್ ಅವರ ಹೆಸರನ್ನು ಅನುಮೋದನೆಗಾಗಿ ಸಂಸದೀಯ ಸಮಿತಿಗೆ ಕಳುಹಿಸಲಾಗಿದೆ.
ವಿಜ್ಞಾನ
1. ಸೈಬರ್ ದಾಳಿ
- ವರ್ಷದ ಜನವರಿಯಿಂದ ಜೂನ್ವರೆಗಿನ ಅವಧಿಯಲ್ಲಿ ದೇಶದಲ್ಲಿ 6,95,396 ಸೈಬರ್ ದಾಳಿ ಪ್ರಕರಣ ದಾಖಲಾಗಿವೆ.
ಸುದ್ದಿಯೇನು?:
- ಸೈಬರ್ ಭದ್ರತೆ ಸಂಸ್ಥೆ ಎಫ್ ಸೆಕ್ಯೂರ್ ವರದಿ ಪ್ರಕಾರ ಭಾರತದ ಅಂತರ್ಜಾಲ ಬಳಕೆದಾರರ ಮೇಲೆ ರಷ್ಯಾ, ಅಮೆರಿಕ, ಚೀನಾ ಮತ್ತು ನೆದರ್ಲಾಂಡ್ ದೇಶಗಳ ಸೈಬರ್ ವಂಚಕರಿಂದ ಅತ್ಯಧಿಕ ದಾಳಿ ನಡೆದಿವೆ.
- ರಷ್ಯಾದಿಂದ 2,55,589, ಅಮೆರಿಕದಿಂದ 1,03,458, ಚೀನಾದಿಂದ 42,544, ನೆದರ್ಲ್ಯಾಂಡ್ ನಿಂದ 19,169 ಮತ್ತು ಜರ್ಮನಿಯಿಂದ 15,330 ದಾಳಿಗಳು (ಒಟ್ಟು 4,36,090 ದಾಳಿ)ನಡೆದಿವೆ.
ಭಾರತದಿಂದಲೂ ದಾಳಿ:
- ಭಾರತದ ಸೈಬರ್ ದಾಳಿಕೋರರು ಆಸ್ಟ್ರಿಯಾದ ಸಂಸ್ಥೆಗಳ ಮೇಲೆ. 12,540, ನೆದರ್ಲ್ಯಾಂಡ್ ಮೇಲೆ 9,267, ಅಮೆರಿಕದ ಮೇಲೆ 6,347, ಜಪಾನ್ 4,701 ಹಾಗೂ ಉಕ್ರೇನ್ 3,708 ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ.
ಭಾರತದ ಸ್ಥಾನ:
- ಇತರ ದೇಶಗಳ ಸಂಸ್ಥೆಗಳ ಮೇಲೆ ಸೈಬರ್ ದಾಳಿ ನಡೆಸಿದ ರಾಷ್ಟ್ರಗಳ ಪಟ್ಟಿಯಲ್ಲಿ 73,482 ದಾಳಿ ಘಟನೆಯೊಂದಿಗೆ ಭಾರತ 13ನೇ ಸ್ಥಾನದಲ್ಲಿದೆ.
- ಸೈಬರ್ ದಾಳಿಗೆ ಒಳಗಾದ ದೇಶಗಳಲ್ಲಿ ಭಾರತ 21ನೇ ಸ್ಥಾನದಲ್ಲಿದೆ.
- ಜಾಗತಿಕವಾಗಿ ಈ ವರ್ಷ ಬ್ರಿಟನ್ ಸಂಸ್ಥೆಗಳ ಮೇಲೆ 9,76,80,746 ಸೈಬರ್ ದಾಳಿ ನಡೆದು ಅಗ್ರಸ್ಥಾನದಲ್ಲಿದ್ದರೆ, ಅಮೆರಿಕ 1,10,10,212 ಸೈಬರ್ ದಾಳಿಗೆ ಒಳಗಾಗಿದೆ.
ಲೆಕ್ಕ ಹಾಕಿದ್ದು ಹೇಗೆ?:
- ಎಫ್ ಸೆಕ್ಯೂರ್ ಸಂಸ್ಥೆಯು ಹನಿಪಾಟ್ಸ್ ಎಂಬ ಸುರಕ್ಷತಾ ಬಲೆಯನ್ನು ಬಳಸಿ ಜಗತ್ತಿನಲ್ಲಿ ನಡೆದ ಸೈಬರ್ ದಾಳಿಗಳ ಲೆಕ್ಕ ಹಾಕಿದೆ.
- ಹನಿಪಾಟ್ಸ್ ಎನ್ನುವುದು ಕಂಪ್ಯೂಟರ್ನ ಸರ್ವರ್ ರೀತಿಯಲ್ಲೇ ಕಾರ್ಯನಿರ್ವಹಿಸುತ್ತದೆ ಮಾಹಿತಿ ಕೋಶಕ್ಕೆ ಅನಧಿಕೃತವಾಗಿ ಪ್ರವೇಶಿಸುವ ಪ್ರಯತ್ನಗಳ ಲೆಕ್ಕ ಇರಿಸುತ್ತದೆ.”
ಸೈಬರ್ ಅಟ್ಯಾಕ್ ಎಂದರೇನು?:
- ಕಂಪ್ಯೂಟರ್ ವ್ಯವಸ್ಥೆಗಳು, ತಂತ್ರಜ್ಞಾನ ಅವಲಂಬಿತ ಉದ್ದಿಮೆಗಳು ಮತ್ತು ಜಾಲಗಳ ಉದ್ದೇಶಪೂರ್ವಕ ಶೋಷಣೆ, ಕಂಪ್ಯೂಟರ್ನ ಕೋಡ್, ಲಾಜಿಕ್ ಅಥವಾ ಡೇಟಾವನ್ನು ಮಾರ್ಪಾಡು ಮಾಡಲು ಮಾಲಿಸಿಯಸ್ ಕೋಡ್ ಅನ್ನು ಬಳಸಲಾಗುತ್ತದೆ.
- ಈ ಮೂಲಕ ಮಾಹಿತಿಗಳನ್ನು ಕದಿಯಲಾಗುತ್ತದೆ.
ಸೈಬರ್ ಅಟ್ಯಾಕ್ ವಿವರಣೆ:
ಈ ಮುಂದಿನವುಗಳು ಸೈಬರ್ ದಾಳಿಯಲ್ಲಿ ಒಳಗೊಂಡಿರಬಹುದು.
- ಮಾಹಿತಿ ಕಳ್ಳತನ, ವಂಚನೆ.
- ಮಾಲ್ವೇರ್, ಫಾರ್ಮಿಂಗ್, ಫಿಶಿಂಗ್, ಸ್ಪ್ಯಾಮಿಂಗ್, ಸೋಫಿಂಗ್, ಸೈವೇರ್, ಟ್ರೋಜನ್ಗಳು ಮತ್ತು ವೈರಸ್ಗಳು.
- ಪಾಸ್ವರ್ಡ್ ಕಳ್ಳತನ,
- ಕಂಪ್ಯೂಟರ್ ವ್ಯವಸ್ಥೆಯನ್ನು ಹಾಳುಗೆಡವಿಕೆ, ಹತೋಟಿಗೆ ತೆಗೆದುಕೊಳ್ಳುವಿಕೆ.
- ವೆಬ್ಸೈಟ್ ನಿಷ್ಕ್ರಿಯಗೊಳಿಸುವುದು.
- ಖಾಸಗಿ ಮತ್ತು ಸಾರ್ವಜನಿಕ ವೆಬ್ ಬ್ರೌಸರ್ಗಳನ್ನು ಅಸ್ಥಿರಗೊಳಿಸುವುದು.
- ಸರ್ವರ್ ಗಳಲ್ಲಿ ಸಂಗ್ರಹಗೊಂಡಿರುವ ಬಳಕೆದಾರರ ಮಾಹಿತಿಗಳ ಕಳ್ಳತನ.
- ಬೌದ್ಧಿಕ ಆಸ್ತಿ ಕಳ್ಳತನ ಅಥವಾ ಅನಧಿಕೃತ ಪ್ರವೇಶ ಬ್ಯಾಂಕ್ ಬಳಕೆದಾರರ ಮಾಹಿತಿ ಕಳ್ಳತನದ ಮೂಲಕ ಹಣ ಕಳ್ಳತನ ಇತ್ಯಾದಿ.