iasjnana
Essay
ನಗರೀಕರಣ ಮತ್ತು ಅದರ ತೊಂದರೆಗಳು

“ನಗರ ನೋಡಲು ಚೆಂದ ಹಳ್ಳಿ ಬದುಕಲು ಚೆಂದ” ಎಂಬ ನುಡಿಯಂತೆ ನಗರೀಕರಣದಿಂದ ಇಂದಿನ ಆಧುನಿಕ ಯುಗದಲ್ಲಿ ನಗರೀಕರಣ ಹಲವು ತೊಂದರೆ ಅನುಭವಿಸುತ್ತಿದೆ.
ಭಾರತದಲ್ಲಿ ಸುಮಾರು 5000 ವರ್ಷಗಳ ಹಿಂದೆಯೇ ನಗರಗಳನ್ನು ನಿರ್ಮಿಸಿದ್ದರು. ಸಿಂಧೂ ನಾಗರೀಕತೆಯ ಕಾಲದಲ್ಲಿ ಹರಪ್ಪ ಮತ್ತು ಮೆಹೆಂಜೋದಾರ್ ಪ್ರಮುಖ ನಗರಗಳಾಗಿದ್ದವು. 2011ರ ಜನಗಣತಿ ಪ್ರಕಾರ ಭಾರತದಲ್ಲಿ ಪ್ರಸ್ತುತ ಶೇ 31.8 ರಷ್ಟು ಸಂಖ್ಯೆ ನಗರ ವಾಸಿಗಳಾಗಿದ್ದಾರೆ. ಕರ್ನಾಟಕವು ಭಾರತದ ನಗರೀಕರಣದಲ್ಲಿ ಏಳನೆಯ ಸ್ಥಾನದಲ್ಲಿದೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 6.1 ಕೋಟಿ ಜನರಲ್ಲಿ 2.35 ಕೋಟಿ ಜನ (38.6%)ನಗರ ವಾಸಿಗಳಾಗಿದ್ದಾರೆ. ನಗರೀಕರಣ ಪ್ರಕ್ರಿಯೆಯಲ್ಲಿ ಕರ್ನಾಟಕವು 2001-11ರ ಅವಧಿಯಲ್ಲಿ ಶೇ 4.68ರಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಭಾರತದಲ್ಲಿ 100000ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶಗಳನ್ನು ಪಟ್ಟಣಗಳೆಂದು, 1,00,000 ಕ್ಕಿಂತ ಹೆಚ್ಚು ಜನ ಸಂಖ್ಯೆಯನ್ನು ಹೊಂದಿರುವ ಪ್ರದೇಶಗಳನ್ನು ಮಹಾನಗರಗಳೆಂದು ಕರೆಯಲಾಗುತ್ತದೆ. ಈಗ ಭಾರತದಲ್ಲಿ ಬಾಂಬೆ, ಕೋಲ್ಕತ್ತಾ, ಚೆನ್ನೈ, ದೆಹಲಿ, ಬೆಂಗಳೂರು, ಹೈದ್ರಾಬಾದ್ , ಪುಣೆ ಮೊದಲಾದವು ಈ ಪಟ್ಟಿಗೆ ಸೇರುತ್ತವೆ. ಕರ್ನಾಟಕದಲ್ಲಿ ಅತಿ ಕಡಿಮೆ ನಗರೀಕರಣ ಹೊಂದಿದ ಜಿಲ್ಲೆ ಕೊಡಗು ಆಗಿದೆ. (ಶೇ. 15).
ದಿನದಿಂದ ದಿನಕ್ಕೆ ಹಳ್ಳಿಗರೂ ವಲಸೆ ಬರುತ್ತಿದ್ದು ಪಟ್ಟಣ ನಗರಗಳಲ್ಲಿ ವಾಸಿಸುವುದಕ್ಕೆ ಪ್ರಾರಂಭಿಸುತ್ತಿರುವುದರಿಂದ ದಿನದಿಂದ ದಿನಕ್ಕೆ ನಗರೀಕರಣ ಹೆಚ್ಚಾದಂತೆ ನಗರೀಕರಣದ ಸಮಸ್ಯೆಗಳು ಹೆಚ್ಚಾಗುತ್ತಿವೆ.
• ನಗರೀಕರಣದ ಅರ್ಥ ಮತ್ತು ವ್ಯಾಖ್ಯೆಗಳು :
ಸಾಮಾನ್ಯವಾಗಿ ಐದು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಹಾಗೂ ಕೃಷಿಯೇತರ ಚಟುವಟಿಕೆಗಳನ್ನು ಅವಲಂಬಿಸಿರುವ ಮಾಧ್ಯಮಿಕ ಸಂಬಂಧವುಳ್ಳ ವೈವಿಧ್ಯಮಯ ಜೀವನವುಳ್ಳ ಜನವಸತಿ ಪ್ರದೇಶವನ್ನು ನಗರ ಎಂದೂ ಕರೆದರೆ “ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆಯಿಂದಾಗಿ ನಗರದಲ್ಲಿ ಜನಸಂಖ್ಯೆಯ ಹೆಚ್ಚಳವಾಗಿ ನಗರವಾಸಿಗಳಾಗುವುದನ್ನು ನಗರೀಕರಣ” ಎನ್ನುತ್ತೇವೆ.
ನಗರೀಕರಣಕ್ಕೆ ಕಾರಣಗಳು :
ಇಂದಿನ ಆಧುನಿಕ ಯುಗದಲ್ಲಿ ಪ್ರಕೃತಿ ಸಹಜ ಪರಿಸ್ಥಿತಿಗಳನ್ನು ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುತ್ತಿದ್ದಾನೆ. ತಂತ್ರಜ್ಞಾನದ ಕ್ಷಿಪ್ರ ಪ್ರಗತಿಯಿಂದ ಅಥವಾ ಹಲವಾರು ಕಾರಣಗಳಿಂದ ನಗರೀಕರಣ ಉಂಟಾಗುತ್ತಿದೆ. ಈ ನಗರೀಕರಣ ಉಂಟಾಗಲು ಕೆಲವು ಪ್ರಮುಖ ಕಾರಣಗಳೆಂದರೆ :
1. ವಿಜ್ಞಾನ ಮತ್ತು ತಂತ್ರಜ್ಞಾನ :
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿವಿಧ ಬಗೆಯ ಸಂಶೋಧನೆಗಳು, ಅನ್ವೇಷಣೆಗಳು ಉಂಟಾಗುವುದರಿಂದ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಮುಖ ಕೊಡುಗೆಗಳಾದ ತೈಲ, ವಿದ್ಯುತ್, ಮತ್ತಿತ್ತರ ಯಂತ್ರೋಪಕರಣಗಳ ಅಭಿವೃದ್ಧಿಯಿಂದ ಹೆಚ್ಚು ನಗರೀಕರಣ ಉಂಟಾಗುತ್ತಿದೆ.
2. ಉದ್ಯೋಗೀಕರಣ :
ಖನಿಜ ಸಂಪತ್ತು ದೊರೆಯುವ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಕೈಗಾರಿಕೆಗಳು ಪ್ರಾರಂಭವಾಗಿವೆ. ಇವುಗಳಲ್ಲಿ ಕೆಲಸ ಮಾಡಲು ಲಕ್ಷಾಂತರ ಜನರ ಅವಶ್ಯವಿದ್ದು, ಗ್ರಾಮೀಣ ಭಾಗದಲ್ಲಿ ಕೆಲಸ ದೊರೆಯದೇ ಇರುವ ಅನೇಕ ಜನರು ವಲಸೆ ಬಂದು ಉದ್ಯೋಗಕ್ಕಾಗಿ ವಾಸಿಸುವುದರಿಂದ ದಿನದಿಂದ ದಿನಕ್ಕೆ ನಗರೀಕರಣ ಹೆಚ್ಚಾಗುತ್ತಿದೆ.
3. ವಾಣಿಜ್ಯೋದ್ಯಮ :
ಆಧುನಿಕ ಕಾಲದಲ್ಲಿ ವಾಣಿಜ್ಯ ಮತ್ತು ವ್ಯಾಪಾರಗಳು ನಗರಗಳ ಪ್ರಮುಖ ಬೆಳವಣಿಗೆಯಲ್ಲಿ ತನ್ನದೇ ಆದ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ವಾಣಿಜ್ಯ ಮತ್ತು ವ್ಯಾಪಾರಗಳು ಬೃಹತ್ ಪ್ರಮಾಣದ ಮಾರುಕಟ್ಟೆಯನ್ನು ಸೃಷ್ಟಿಸಿದೆ. ವಾಣಿಜ್ಯ ಮತ್ತು ವ್ಯಾಪಾರ ಅಭಿವೃದ್ಧಿಯಾದಂತೆ ನಗರೀಕರಣದ ಅಭಿವೃದ್ಧಿಯು ಆಗುತ್ತಿದೆ.
4. ಸಾರಿಗೆ ಮತ್ತು ಸಂಪರ್ಕ :
ನಗರಗಳ ಬೆಳವಣಿಗೆಗೆ ಸಾರಿಗೆ ಮತ್ತು ಸಂಪರ್ಕ ಅಭಿವೃದ್ಧಿಯು ಸಹ ಪ್ರಮುಖ ಕಾರಣವಾಗಿದೆ. ಕಾರ್ಖಾನೆಗಳಿಗೆ ಕಚ್ಚಾ ಸಾಮಗ್ರಿಗಳನ್ನು ಪೂರೈಸುವುದು ಮತ್ತು ಸಿದ್ಧಪಡಿಸುವ ವಸ್ತುಗಳನ್ನು ಕಾರ್ಖಾನೆಯಿಂದ ಇತರ ಪ್ರದೇಶಗಳಿಗೆ ಸಾಗಿಸುವುದು ಈ ತರಹ ಸಂಪರ್ಕದಿಂದ ಗ್ರಾಮೀಣ ಭಾಗದ ಜನ ನಗರಗಳಿಗೆ ಬಂದುಹೋಗುವ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದು ನಗರೀಕರಣಕ್ಕೆ ಎಡೆಮಾಡಿಕೊಡುತ್ತಿದೆ.
5. ಜನಸಂಖ್ಯೆಯಲ್ಲಿನ ಏರಿಕೆ :
ನಗರೀಕರಣಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಜನಸಂಖ್ಯೆಯಲ್ಲಿ ಏರಿಕೆ. ಜನಸಂಖ್ಯೆ ಹೆಚ್ಚಳದಿಂದ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ, ಆಹಾರದ ಕೊರತೆಯಿಂದಾಗಿ ಜನರು ನಗರಕ್ಕೆ ವಲಸೆ ಬರುತ್ತಿದ್ದಾರೆ.
6. ಮೂಲಭೂತ ಸೌಕರ್ಯಗಳ ಆಕರ್ಷಣೆ :
ಗ್ರಾಮೀಣ ಭಾಗದಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ಜನರು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಕಾರಣ ನಗರಗಳಲ್ಲಿ ವಿವಿಧ ಸೇವಾ ಸೌಲಭ್ಯ, ಆಕರ್ಷಣೆ, ನೀರು ಸರಬರಾಜು ವ್ಯವಸ್ಥೆ, ಗೃಹಬಳಕೆಯ ಇಂಧನ, ನಗರ ಸಾರಿಗೆ ಮುಂತಾದ ಮೂಲಸೌಕರ್ಯಗಳು ದೊರೆಯುವುದರಿಂದ ಜನರು ನಗರಗಳಿಗೆ ವಲಸೆ ಬರುತ್ತಿರುವುದರಿಂದ ಕ್ಷಿಪ್ರಗತಿಯಲ್ಲಿ ನಗರೀಕರಣ ಉಂಟಾಗುತ್ತಿದೆ.
ನಗರೀಕರಣದ ಬೆಳವಣಿಗೆಯ ಜೊತೆಜೊತೆಗೆ ನಗರೀಕರಣದ ಸಮಸ್ಯೆಗಳು ಪ್ರತಿನಿತ್ಯ ಹೆಚ್ಚಾಗುತ್ತಿವೆ. ಇದರಿಂದ ಮುಂದಿನ ಜೀವನ ಊಹಿಸಲು ಕಷ್ಟವಾಗದ ರೀತಿಯಲ್ಲಿ ಪರಿಣಾಮ ಬೀರಬಹುದು.ನಗರೀಕರಣದ ಸಮಸ್ಯೆಗಳು ಹೆಚ್ಚಾದರೆ ಪರಿಸರ, ಮನುಕುಲ, ಪ್ರಾಣಿ, ಗಾಳಿ, ನೀರು ಮುಂತಾದವು ನಾಗರೀಕರ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.
• ನಗರೀಕರಣದ ಸಮಸ್ಯೆಗಳು :
ವಾಸ್ತವವಾಗಿ ಅತೀ ಬಡತನ ಮತ್ತು ಅನಕ್ಷರತೆ ಹಾಗೂ ಜನಸಂಖ್ಯೆ ಈ ಮೂರು ಪ್ರಮುಖ ಅಂಶಗಳಿಂದ ನಗರ ಪ್ರದೇಶಗಳಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. . ಹೆಚ್ಚು ನಗರಗಳಲ್ಲಿ 40% ನಾಗರೀಕರು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇಂತಹ ಪ್ರದೇಶಗಳಲ್ಲಿ ವಿದ್ಯುತ್, ಸುರಕ್ಷಿತ ಕುಡಿಯುವ ನೀರು, ಹಾಗೂ ಯಾವುದೇ ತರಹದ ಮೂಲಭೂತ ಸೌಕರ್ಯಗಳು ಸರಿಯಾಗಿ ದೊರೆಯುತ್ತಿಲ್ಲ. ಆದ್ದರಿಂದ ಭಾರತದ ನಗರಗಳ ಭವಿಷ್ಯವು ಯೋಜಕರಿಗೆ ಮತ್ತು ವ್ಯವಸ್ಥಾಪಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಒಂದು ವೇಳೆ ನಗರ ಜನಸಂಖ್ಯೆ ಪ್ರಸ್ತುತ ವೇಗದಲ್ಲಿ ಸಾಗಿದರೆ ಅದು ಹಲವು ಸಮಸ್ಯೆಗಳನ್ನು ಊಹೆ ಮಾಡಲೂ ಸಾಧ್ಯವಾಗದ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಈ ರೀತಿ ನಗರೀಕರಣಕ್ಕೆ ಹಲವಾರು ಸಮಸ್ಯೆಗಳಿವೆ. ಅದರಲ್ಲಿ ಪ್ರಮುಖವಾದವುಗಳೆಂದರೆ :
1. ನಗರದ ಬಡತನ :
ನಗರದ ಅರ್ಧದಷ್ಟು ಜನ ಬಡತನದಲ್ಲಿದ್ದು ಕಡಿಮೆ ಜೀವನಮಟ್ಟದಲ್ಲಿ ವಾಸಿಸುತ್ತಿದ್ದಾರೆ.ಇದಕ್ಕೆ ಪ್ರಮುಖ ಕಾರಣ ಕಡಿಮೆ ಭತ್ಯ, ಶ್ರೀಮಂತ ಪರ ಆರ್ಥಿಕ ನೀತಿಗಳು ನಿಶ್ಚಿತ ಆದಾಯವಿಲ್ಲದಿರುವುದು ಮತ್ತು ಹಣದುಬ್ಬರ ಇತ್ಯಾದಿ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ((United Nations Development Programme) ) ನೆರವಿನಿಂದ ಭಾರತದಲ್ಲಿ ಮೊದಲ ಬಾರಿಗೆ ನಗರ ಬಡತನದ ಬಗ್ಗೆ ವರದಿ ಪ್ರಕಟಿಸಲಾಯಿತು. “ಭಾರತದ ನಗರದ ಬಡತನದ ವರದಿ 2009” ಇದು ನಗರದ ಬಡಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಬದಲಾವಣೆ ಅಗತ್ಯ ಎಂದು ಹೇಳಿದೆ.
2. ನಗರ ವಸತಿ ಸಮಸ್ಯೆ :
1991ರಲ್ಲಿ ಭಾರತದಲ್ಲಿ ನಗರಗಳಲ್ಲಿ ವಸತಿಯ ಅಭಾವವು ಸುಮಾರು 30 ಮಿಲಿಯನ್ ಎಂದು ಅಂದಾಜಿಸಲಾಗಿತ್ತು.
3. ನಗರಗಳ ತ್ಯಾಜ್ಯ ನಿರ್ವಹಣಾ ಸಮಸ್ಯೆ :
ಭಾರತದ ನಗರಗಳಲ್ಲಿ ಮತ್ತು ಉಪನಗರಗಳಲ್ಲಿ ಒಬ್ಬ ವ್ಯಕ್ತಿ ಸರಾಸರಿ 300-400gm ನಷ್ಟು ತ್ಯಾಜ್ಯ ಸೃಷ್ಟಿಸುತ್ತಾನೆ. ಪ್ರತಿನಿತ್ಯ 80% ಮಾತ್ರ ಪ್ರಸ್ತುತ ಶೇಖರಿಸಲಾಗುತ್ತಿದ್ದು ಉಳಿದವುಗಳು ರಸ್ತೆಗಳಲ್ಲಿ, ಗಟಾರುಗಳಲ್ಲಿ ಕೊಳೆಯಲು ಬಿಡಲಾಗುತ್ತಿದೆ. ಆದ್ದರಿಂದ ನಗರ ನೈರ್ಮಲ್ಯಕ್ಕೆ ತೀವ್ರ ಧಕ್ಕೆಯಾಗುತ್ತಿದೆ.
4. ಪರಿಸರ ಮಾಲಿನ್ಯ :
ನಗರಗಳಲ್ಲಿ CFC, ಕಾರ್ಬನ್, ಉಪಯುಕ್ತ ಅನಿಲಗಳು ಮತ್ತು ರೇಡಿಯೋಥೆರಪಿ ತ್ಯಾಜ್ಯಗಳ ವಿಸರ್ಜನೆ ಮುಂತಾದವುಗಳು ರಸ್ತೆ ಬದಿಯಲ್ಲಿ ಗಟಾರಗಳಲ್ಲಿ ಬಿದ್ದು ನಗರಗಳನ್ನು ಕೊಳಕಾಗಿ ಮಾಡುತ್ತಿದೆ. ಇದರಿಂದ ಪರಿಸರ ಹಾಳಾಗುತ್ತಿದೆ.
5. ಸಂಚಾರ ದಟ್ಟಣೆಯ ಸಮಸ್ಯೆ :
ಭಾರತದ ನಗರಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದ್ದು ನಗರದ ಹೆಚ್ಚಿನ ಜನ ಸಂಚಾರ ದಟ್ಟನೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಚಾರ ದಟ್ಟನೆಯ ಸಮಸ್ಯೆಯು ನಗರದ ಬಹುದೊಡ್ಡ ಸಮಸ್ಯೆಗಳಲ್ಲಿ ಇದು ಒಂದಾಗಿದೆ.
6. ನೀರು ಪೂರೈಕೆ ಮತ್ತು ಚರಂಡಿ ವ್ಯವಸ್ಥೆ :
ಭಾರತದ ಯಾವುದೇ ನಗರಗಳು ದಿನದ 24 ಗಂಟೆಯು ಕುಡಿಯುವ ನೀರಿನ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಕುಡಿಯುವ ನೀರಿನ ಜೊತೆ ಒಳಚರಂಡಿ ವ್ಯವಸ್ಥೆಯು ಹದಗೆಟ್ಟಿದೆ. ನಗರದ ಕೈಗಾರಿಕೆಗಳು ಪರಿಸರವನ್ನು ಅಶುದ್ಧಗೊಳಿಸುತ್ತವೆ. ನಗರದ ಚರಂಡಿ ನೀರು ನದಿಗಳಿಗೆ ವಿಲೀನವಾಗಿ ಅಶುದ್ಧವಾಗುತ್ತಿವೆ.

ಒಟ್ಟಾರೆಯಾಗಿ ಹೇಳುವುದಾದರೆ ಒಂದು ದೃಷ್ಟಿಯಿಂದ ನಗರೀಕರಣ ಒಳ್ಳೆಯದು. ಇದರಿಂದ ಸಾರಿಗೆ ಸಂಪರ್ಕ, ಅಭಿವೃದ್ಧಿ, ತಂತ್ರಜ್ಞಾನ ಬೆಳವಣಿಗೆ, ಕೈಗಾರೀಕರಣ ಮುಂತಾದ ರೀತಿಯಲ್ಲಿ ದೇಶದ ಅಭಿವೃದ್ಧಿಗೆ ಸಹಾಯ ಮಾಡಿಕೊಡುತ್ತದೆ. ಆದರೆ ಇನ್ನೊಂದು ದೃಷ್ಟಿಯಿಂದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಹೆಚ್ಚು ಹೆಚ್ಚು ಜನರು ನಗರಗಳಿಗೆ ವಲಸೆ ಬರುವುದರಿಂದ ಜನಸಂಖ್ಯೆ ತೀವ್ರ ಮಟ್ಟದಲ್ಲಿ ಮಹಾನಗರಗಳಲ್ಲಿ ಹೆಚ್ಚಾಗಿ ನಗರೀಕರಣ ಉಂಟಾಗಿ ನಗರಗಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಮುಂದಿನ ಜೀನವದ ಪರಿಕಲ್ಪನೆಯೂ ಮೂಡದಂತಹ ಸಮಸ್ಯೆಗಳನ್ನು ನಗರೀಕರಣ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now