iasjnana
Essay
ಪರಿಸರ ಕಾರ್ಯ ನಿರ್ವಹಣೆ ಸೂಚ್ಯಂಕ -2018 ರಲ್ಲಿ ಭಾರತದ ಕಳಪೆ ಸೂಚ್ಯಂಕ ಮತ್ತು ಅದರ ಪರಿಣಾಮ
“ಪರಿಸರ ಸಂರಕ್ಷಿಸಿ, ಜೀವ ಸಂಕುಲ ಉಳಿಸಿ” – ಹೀಗೆಂದು ಎಲ್ಲೆಲ್ಲಿಯೂ ಕೇಳುತ್ತಿರುವ ಆರ್ತನಾದ ಜಗತ್ತನ್ನು ಬೆಚ್ಚಿಬೀಳಿಸಿದೆ.ಪರಿಸರ ಮಾಲಿನ್ಯದ ಮಟ್ಟ ಎಲ್ಲೆ ಮೀರಿ ನಿಂತಿದೆ. ಇತ್ತೀಚಿನ ದಿನಗಳವರೆವಿಗೆ ಕಾಡು ಸಂರಕ್ಷಣೆ, ಜಲ ವರ್ಧನೆಯ ಮೂಲಗಳ ಹುಡುಕಾಟ ಮುಂತಾದವುಗಳಿಗೆ ಪರಿಸರ ಕಾಪಾಡುವ ಕಾರ್ಯ ನಿಮಿತ್ತ ಸೀಮಿತವಾಗಿತ್ತು. ಆದರೆ ಶೋಚನೀಯವಾಗಿ, ಮಲಿನದ ಮಟ್ಟ ಅಳೆದು, ಸೂಕ್ತ ಪ್ರಮಾಣದ ಕ್ರಮ ಕೈಗೊಳ್ಳಬೇಕಾದ ಭಯಾನಕ ಹಂತ ತಲುಪಿದ್ದೇವೆ.
ಜನವರಿ 24, 2018ರಂದು ಪರಿಸರ ಕಾರ್ಯನಿರ್ವಹಣೆ ಸೂಚ್ಯಂಕ (ಇಪಿಐ) 2018 ಅಮೆರಿಕದ ಯೇಲ್ ಮತ್ತು ಕೊಲಂಬಿಯಾದಲ್ಲಿನ ಎರಡು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಂದ ಬಿಡುಗಡೆಯಾಯಿತು. ಈ ಸೂಚಿಯನ್ನು ವಿಶ್ವ ಆರ್ಥಿಕ ವೇದಿಕೆಯ ಸಹಯೋಗದೊಂದಿಗೆ ತಯಾರಿಸಲಾಯಿತು ಮತ್ತು ಡೇವಸ್ ಸ್ವಿಟ್ಸ್ಜರ್‍ಲ್ಯಾಂಡ್‍ನ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಒಂದು ಭಾಗವಾಗಿಯೂ ಬಿಡುಗಡೆ ಮಾಡಲಾಯಿತು.
ಪರಿಸರ ಕಾರ್ಯನಿರ್ವಹಣೆ ಸೂಚ್ಯಂಕ 2018 10 ವಿಭಾಗಗಳಲ್ಲಿ 24 ಕಾರ್ಯನಿರ್ವಹಣೆ ಸೂಚಕಗಳನ್ನು, 180 ದೇಶಗಳ ಪರಿಸರ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯ ಆಧಾರದ ಮೇಲೆ ಶ್ರೇಣಿಗಳನ್ನು ಬಿಡುಗಡೆ ಮಾಡಿತು. ಈ ದ್ವಿವಾರ್ಷಿಕ ಸೂಚ್ಯಂಕದಲ್ಲಿ, ಪರಿಸರ ಸಂರಕ್ಷಣೆಯ ವಿಷಯದಲ್ಲಿ ಭಾರತವು ನಾಲ್ಕನೇ ಅತ್ಯಂತ ಕಳಪೆ ಪ್ರದರ್ಶಿತ ರಾಷ್ಟ್ರವಾಗಿ ಆಯ್ಕೆಯಾಗಿದೆ.
2016ರ ಪರಿಸರ ಕಾರ್ಯನಿರ್ವಹಣಾ ಸೂಚ್ಯಂಕದಲ್ಲಿ ಭಾರತವು 141 ನೇ ಸ್ಥಾನದಲ್ಲಿತ್ತು. ಪರಿಸರ ಸಂರಕ್ಷಣೆಯ ವಿಷಯದಲ್ಲಿ ಕಳಪೆ ನಿರ್ವಹಣೆ ವಿಷಯವಾಗಿ ಪ್ರಸ್ತುತವಾಗಿರುವ ಪರಿಸರ ಸಂರಕ್ಷಣ ನೀತಿಗಳ ವಿಷಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಪರಿಸರ ಕಾರ್ಯನಿರ್ವಹಣೆ ಸೂಚ್ಯಂಕ 2018ದಲ್ಲಿ ಜಗತ್ತಿನ ಕಣ್ಣಿನಲ್ಲಿ ಭಾರತದ ಸ್ಥಿತಿ ಅವಮಾನಗೇಡಿಯನ್ನಾಗಿಸಿದೆ.
ಪ್ರಥಮವಾಗಿ ಗಾಳಿಯ ಗುಣಮಟ್ಟದ ವಿಶ್ಲೇಷನೆಯು ಹೀಗಿದೆ:
•ಭಾರತದಲ್ಲಿ ವಾಯು ಗುಣಮಟ್ಟವು ಸಾರ್ವಜನಿಕ ಆರೋಗ್ಯಕ್ಕೆ ಪ್ರತಿಕೂಲವಾಗಿ ಪರಿಣಾಮವನ್ನುಂಟು ಮಾಡುವ ಸ್ಥಿತಿ ತಲುಪಿದೆ. ಸಮೀಕ್ಷೆ ಮಾಡಲಾದ 180 ದೇಶಗಳಲ್ಲಿ, ವಾಯು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಭಾರತವು 178 ನೇ ಶ್ರೇಯಾಂಕವನ್ನು ಹೊಂದಿದ್ದು, 5.75 ಅಂಕಗಳನ್ನು ಹೊಂದಿದೆ.
•ಭಾರತವು ವಿಶ್ವದ ಅತಿದೊಡ್ಡ ಜನ ಸಂಖ್ಯೆಯನ್ನು ಹೊಂದಿದ್ದರೂ ಆಧುನಿಕ ಶಕ್ತಿಯ ಬಳಕೆಯ ತಂತ್ರಜ್ಞಾನಗಳನ್ನು ಬಳಸುವಲ್ಲಿ ಬಹಳ ಹಿಂದೆ ಉಳಿದಿದೆ. ಸುಮಾರು 800 ಮಿಲಿಯನ್ ಜನರು ಅಡುಗೆಗಾಗಿ ಸಾಂಪ್ರದಾಯಿಕ ಕಟ್ಟಗೆ ಉರುವಲನ್ನು ಅವಲಂಬಿಸಿರುತ್ತಾರೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಗ್ರಾಮೀಣ ಜನ ಸಂಖ್ಯೆಯಲ್ಲಿ 75% ರಷ್ಟು ಭಾರತದಲ್ಲಿ ಅಡುಗೆ ಮಾಡಲು ಮತ್ತು ನೀರು ಕಾಯಿಸಲು ಘನ ಇಂಧನಗಳನ್ನು ಅವಲಂಬಿಸಿರುತ್ತದೆ. ಇದು ಖಂಡಿತವಾಗಿಯೂ ಚಿಂತಿಸಬೇಕಾದ ವಿಷಯವಾಗಿದೆ.
ಗಾಳಿಯಲ್ಲಿರುವ ಕಣಗಳ ಸಂಖ್ಯೆಯನ್ನು ಅಳೆದು ಹೀಗೆ ಬಿಂಬಿಸಲಾಗಿದೆ:
ಗಾಳಿಯಲ್ಲಿರುವ ಕಣಗಳ ಸಂಖ್ಯೆ ಹೆಚ್ಚಿದ ಸಾಂದ್ರತೆಯಿಂದಾಗಿ 2015 ರಲ್ಲಿ 1.6 ದಶ ಲಕ್ಷಕ್ಕಿಂತ ಹೆಚ್ಚು ಸಾವುಗಳು (ಜಾಗತಿಕ ಸಾವುಗಳಲ್ಲಿ 35%) ಸಂಭವಿಸಿವೆ. 1990ರಲ್ಲಿ, ಗಾಳಿಯಲ್ಲಿರುವ ಕಣಗಳ ಹೆಚ್ಚಿದ ಸಾಂದ್ರತೆಯಿಂದಾಗಿ ಭಾರತದಲ್ಲಿ ಸಂಭವಿಸಿದ ವಾರ್ಷಿಕ ಸಾವುಗಳು ಸುಮಾರು 1.3 ದಶಲಕ್ಷ.
•ಸರ್ಕಾರದ ಕ್ರಮದ ಹೊರತಾಗಿಯೂ, ಘನ ಇಂಧನಗಳ ಮಾಲಿನ್ಯ, ಕಲ್ಲಿದ್ದಲು ಮತ್ತು ಬೆಳೆಗಳ ಉಳಿಕೆ ಸುಡುವಿಕೆ ಮತ್ತು ಮೋಟಾರು ವಾಹನಗಳ ಹೊರಸೂಸುವಿಕೆಯು ವಾಯು ಗುಣಮಟ್ಟವನ್ನು ತೀವ್ರವಾಗಿ ತಗ್ಗಿಸುತ್ತಿದೆ. ಉದಾಹರಣೆಗೆ: ನವೆಂಬರ್ 2017 ರಲ್ಲಿ, ದೆಹಲಿ ಕಣಗಳ ಮಟ್ಟವು ದಾಖಲೆಯ ಗರಿಷ್ಠ 969 ug/m3 ರ ಮಟ್ಟವನ್ನು ತಲುಪಿದ್ದರಿಂದ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು,.ವಿಶ್ವ ಆರೋಗ್ಯ ಸಂಸ್ಥೆ ಅಂದಾಜು 25 ug/m3 ಕ್ಕಿಂತ ಹೆಚ್ಚಿನದನ್ನು ಅಸುರಕ್ಷಿತ ಎಂದು ಪರಿಗಣಿಸುತ್ತದೆ.
•ಭಾರತವು ಶಕ್ತಿಯ ಉತ್ಪಾದನೆಗೆ ಕಲ್ಲಿದ್ದಲಿನ ಮೇಲೆ ಹೆಚ್ಚು ಅವಲಂಬಿತವಾಗಿದೆ.ಇದು ಮೂರು ಶೇಕಡಾ ಸಲ್ಫರ್ ಅನ್ನು ಹೊಂದಿರುತ್ತದೆ. ಇತ್ತೀಚಿನ ಉಪಗ್ರಹ ಅಧ್ಯಯನಗಳ ಅನುಸಾರ 2007ರಿಂದ ಭಾರತದ ಗಂಧಕದ ಡೈ ಆಕ್ಸೈಡ್ ಹೊರ ಸೂಸುವಿಕೆಯು 50%ನಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಇದರ ಪರಿಣಾಮವಾಗಿ, ಭಾರತವು ಮಾನವ ಜನ್ಯ ಸಲ್ಫರ್ ಡೈ ಆಕ್ಸೈಡ್‍ನ ವಿಶ್ವದ ಅತಿದೊಡ್ಡ ಹೊರಸೂಸುವ ಪ್ರದೇಶವಾಗಿ ಹೊರ ಹೊಮ್ಮಿದೆ.
ಇನ್ನು ಜಲ ಸಂಬಂಧಿ ಮಲಿನಗಳನ್ನು ಪರಿಗಣಿಸಿದಾಗ, ನೀರು ಮತ್ತು ನೈರ್ಮಲ್ಯದ ವಿಷಯವನ್ನು ನಿರೂಪಿಸಲಾಯಿತು.
• ಕಳಪೆ ಮಟ್ಟದ ಹೆಣ್ಣು ಮಕ್ಕಳ ಋತುಚಕ್ರದ ನೈರ್ಮಲ್ಯವು ಭಾರತದಲ್ಲಿ ಸುಮಾರು70%ನಷ್ಟು ಸಂತಾನೋತ್ಪತ್ತಿ ರೋಗಗಳಿಗೆ ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿದೆ. ಕಳಪೆ ಋತುಚಕ್ರದ ನೈರ್ಮಲ್ಯ ನಿರ್ವಹಣೆ ಹೆಣ್ಣು ಮಕ್ಕಳ ಶಿಕ್ಷಣ ಮುಂದುವರೆಸುವ ಅವಕಾಶವನ್ನು ಸಹ ಅಪಾಯಕ್ಕೆ ತರುತ್ತದೆ. ಭಾರತದಲ್ಲಿ ಬಾಲಕಿಯರು ಸರಾಸರಿ 5 ದಿನಗಳು ಶಾಲೆಯಿಂದ ತಪ್ಪಿಸಿಕೊಳ್ಳುವುದು, ಮತ್ತು ನೈರ್ಮಲ್ಯ ಸೌಲಭ್ಯಗಳ ಕೊರತೆಯಿಂದಾಗಿ 23% ಮಕ್ಕಳು ಕಲಿಕೆಯನ್ನು ನಿಲ್ಲಿಸುವುದು ಸಾಮಾಜಿಕ ಪರಿಸರಕ್ಕೂ ಅನಾರೋಗ್ಯಕರ ಬೆಳವಣಿಗೆಯಾಗಿದೆ. ಹೀಗಾಗಿ, ಋತುಚಕ್ರವನ್ನು ಆರೋಗ್ಯಕರವಾಗಿ ನಿರ್ವಹಿಸಲು ಶುದ್ಧ ನೀರು ಮತ್ತು ನೈರ್ಮಲ್ಯದ ಸೌಲಭ್ಯಗಳ ಅವಶ್ಯಕತೆ ಇದೆ.
•ಭಾರತದಲ್ಲಿ 113 ದಶಲಕ್ಷ ಹದಿಹರೆಯದ ಬಾಲಕಿಯರಿದ್ದಾರೆ, ಆದರೆ 2015ರ ಸಮೀಕ್ಷೆಯ ಪ್ರಕಾರ ಕೇವಲ 53% ರಷ್ಟು ಸರ್ಕಾರಿ ಶಾಲೆಗಳು ಮಾತ್ರ ಅವರಿಗೆ ಪ್ರತ್ಯೇಕವಾದ ನೈರ್ಮಲ್ಯ ಸೌಲಭ್ಯಗಳನ್ನು ದೊರಕಿಸಿದೆ.
•ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) 2015ರಲ್ಲಿ ಬಿಡುಗಡೆ ಮಾಡಿದ ಒಂದು ವರದಿಯ ಪ್ರಕಾರ 1.3 ಶತಕೋಟಿ ಜನಸಂಖ್ಯೆಯ ಅರ್ಧದಷ್ಟು ಜನರು ಇನ್ನೂ ತೆರೆದ ಪ್ರದೇಶಗಳಲ್ಲಿ ಮಲವಿಸರ್ಜನೆ ಮತ್ತು ಮೂತ್ರವಿಸರ್ಜನೆ ಮಾಡುತ್ತಾರೆ. ಇದು ಅಂತರ್ಜಲ ನೀರಿನ ಮಾಲಿನ್ಯಕ್ಕೆ ಕಾರಣವಾಗಿದೆ.
ಪ್ರಸ್ತುತದಂತೆ ಪರಿಸರದ ಅವನತಿ ಮುಂದುವರಿದರೆ, ಮಾನವ ಸಾವಿನ ಸಂಖ್ಯೆ ಸಮಾಜಕ್ಕೆ ಅಸಹನೀಯವಾಗಿರುತ್ತದೆ.ಅಲ್ಲದೆ, ಆರೋಗ್ಯದ ಮೇಲೆ ಹೆಚ್ಚಿನ ವೆಚ್ಚವು ಲಕ್ಷಾಂತರ ಭಾರತೀಯರನ್ನು ಬಡತನ ರೇಖೆಗಿಂತ ಕೆಳಗೆ ತಳ್ಳುತ್ತದೆ.ಅಂದಾಜು ಪ್ರಕಾರ, ಆರೋಗ್ಯದ ಮೇಲೆ ಹೆಚ್ಚಿನ ವೆಚ್ಚದ ಪರಿಣಾಮದಿಂದಾಗಿ 63 ಮಿಲಿಯನ್ ಭಾರತೀಯರು ಬಡತನದ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ.
ಪರಿಸರದ ಅವನತಿಯು ನೈಸರ್ಗಿಕ ಸಂಪನ್ಮೂಲಗಳ ಕೊರತೆಯನ್ನು ಉಂಟು ಮಾಡುತ್ತದೆ ಮತ್ತು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.2017ರಲ್ಲಿ ವಲ್ರ್ಡ್ ಬ್ಯಾಂಕ್ ಗ್ರೂಪ್ ಬಿಡುಗಡೆ ಮಾಡಿದ ವರದಿಯಂತೆ, ಪರಿಸರ ವಿಘಟನೆಯಿಂದ ಭಾರತಕ್ಕೆ ವರ್ಷಕ್ಕೆ 80 ಬಿಲಿಯನ್ ಅಮೇರಿಕನ್ ಡಾಲರ್‍ನಷ್ಟು ವೆಚ್ಚವಾಗುತ್ತಿದೆ.
ಬಹುಪಾಲು ಭಾರತೀಯರು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಅವಲಂಬಿಸಿರುವುದರಿಂದ, ಸಾರ್ವತ್ರಿಕ ಬೆಳವಣಿಗೆಯನ್ನು ಸಾಧಿಸಲು ಪರಿಸರ ಸಂರಕ್ಷಣೆ ಅತ್ಯಗತ್ಯ.ಇಪಿಐ ನಲ್ಲಿ ಸೂಚಿಸಿದಂತೆ ಕಡಿಮೆ ಅಂಕಗಳು ಹಲವಾರು ಮಜಲುಗಳಲ್ಲಿ ರಾಷ್ಟ್ರೀಯ ಸಮರ್ಥನೀಯತೆಯ ಪ್ರಯತ್ನಗಳ ಅಗತ್ಯತೆಯನ್ನು ಸೂಚಿಸುತ್ತವೆ, ವಿಶೇಷವಾಗಿ ಗಾಳಿಯ ಗುಣಮಟ್ಟವನ್ನು ಸ್ವಚ್ಛಗೊಳಿಸುವಿಕೆ, ಜೀವ ವೈವಿಧ್ಯತೆಯನ್ನು ರಕ್ಷಿಸುವಿಕೆ ಮತ್ತು ಹಸಿರು-ಮನೆ ಅನಿಲ ಹೊರಸೂಸುವಿಕೆಗಳನ್ನು ಕಡಿಮೆ ಮಾಡುವುದು.ಪರಿಸರ ವಿಘಟನೆಯು ದೀರ್ಘಕಾಲದವರೆಗೆ ಮುಂದುವರಿದರೆ, ಅದು ನಾಗರಿಕ ಅಶಾಂತಿಗೆ ಕಾರಣವಾಗಬಹುದು ಎಂದು ಇಪಿಐ ಎಚ್ಚರಿಸಿದೆ.ಇದೆಲ್ಲಾ ಅಂಶಗಳನ್ನು ಗಮನಿಸಿದರೆ ಪರಿಸರ ಸಂರಕ್ಷಣೆಯ ಕ್ರಮಗಳನ್ನು ಇನ್ನು ತಡಮಾಡದೆ ಕೈಗೊಳ್ಳುವುದು, ನೀತಿ ತಯಾರಿಕೆ ಮಾತ್ರವಲ್ಲ ಕಾರ್ಯರೂಪಕ್ಕೆ ತರುವುದು ಅತ್ಯವಶ್ಯಕವಾಗಿದೆ.

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now